​ಲಡಾಖ್ ನಲ್ಲಿ ಭೀಕರ ಹಿಮಪಾತ: ಮೃತರ ಸಂಖ್ಯೆ 5ಕ್ಕೆ ಏರಿಕೆ, ಐವರು ನಾಪತ್ತೆ

Update: 2019-01-19 05:05 GMT

ಶ್ರೀನಗರ, ಜ. 19: ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶ ಖರ್ದುಂಗ್ ಲಾ ಎಂಬಲ್ಲಿ ಚಲಿಸುತ್ತಿದ್ದ ಟ್ರಕ್‌ನ ಮೇಲೆ ಭಾರಿ ಹಿಮ ರಾಶಿ ಬಿದ್ದು, ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐದು ಮಂದಿ ಕಣ್ಮರೆಯಾಗಿದ್ದಾರೆ.

ಐದು ಮಂದಿಯ ಶವಗಳನ್ನು ಪತ್ತೆ ಮಾಡಲಾಗಿದ್ದು, ಇತರ ಐದು ಮಂದಿಯ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ. ಇವರು ಬದುಕಿ ಉಳಿದಿರುವ ಸಾಧ್ಯತೆಗಳು ಕ್ಷೀಣ ಎಂದು ಉನ್ನತ ಮೂಲಗಳು ಹೇಳಿವೆ.

"ಶುಕ್ರವಾರ 10 ಮಂದಿ ನಾಗರಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಮೇಲೆ ಖರ್ದುಂಗ್ ಲಾ ಪಾಸ್ ಬಳಿ ಭಾರಿ ಹಿಮ ರಾಶಿ ಬಿದ್ದಿದೆ" ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ. 17500 ಅಡಿ ಎತ್ತರದ ಈ ರಸ್ತೆ, ವಾಹನ ಚಾಲನೆಗೆ ಯೋಗ್ಯವಾದ ವಿಶ್ವದ ಅತಿ ಎತ್ತರದ ರಸ್ತೆ ಎಂಬ ಖ್ಯಾತಿ ಹೊಂದಿದೆ. ಸುಮಾರು 20 ಅಡಿ ಅವಶೇಷಗಳಲ್ಲಿ ಟ್ರಕ್ ಸಿಕ್ಕಿ ಹಾಕಿಕೊಂಡಿದೆ. ಖರ್ದುಂಗ್ ಲಾ ಪಾಸ್‌ನ ತುದಿಯಿಂದ 800 ಮೀಟರ್ ದೂರದಲ್ಲಿ ದಕ್ಷಿಣ ಪುಲ್ಲು ಸಮೀಪ ಈ ದುರಂತ ಸಂಭವಿಸಿದೆ.

ತಕ್ಷಣ ಸೇನಾ ಯೋಧರು ಪರಿಹಾರ ಕಾರ್ಯಾಚರಣೆಗೆ ಧುಮುಕಿದ್ದು, ಶೋಧಕಾರ್ಯ ಮುಂದುವರಿದಿದೆ. ದಕ್ಷಿಣ ಪುಲ್ಲು ಮತ್ತು ಉತ್ತರ ಪುಲ್ಲು ಪ್ರದೇಶದಲ್ಲಿ ನಿಯೋಜಿತರಾಗಿದ್ದ ಯೋಧರು ಕೂಡಾ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ರಕ್ಷಣಾ ವಕ್ತಾರರು ವಿವರಿಸಿದ್ದಾರೆ.

ಈ ಮಧ್ಯೆ ಸೇನೆಯ ಹೆಲಿಕಾಪ್ಟರ್‌ಗಳನ್ನು ಸೇವೆಗೆ ನಿಯೋಜಿಸಲಾಗಿದ್ದು, ಹಿಮ ನದಿ ದುರಂತ ಪರಿಹಾರ ಕಾರ್ಯದಲ್ಲಿ ವಿಶೇಷ ತರಬೇತಿ ತಡೆದ ತಂಡಗಳನ್ನೂ ಸ್ಥಳಕ್ಕೆ ಕಳುಹಿಸಲಾಗಿದೆ. ವಿಶೇಷ ಹಿಮಪಾತ ಪರಿಹಾರ ಸಾಧನ, ವೈದ್ಯಕೀಯ ಸಾಧನಗಳು ಮತ್ತು ಹಿಮಪಾತ ಪರಿಹಾರ ಕಾರ್ಯದಲ್ಲಿ ನೆರವಾಗುವ ವಿಶೇಷ ಶ್ವಾನಪಡೆಯನ್ನು ಈ ತಂಡ ಹೊಂದಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News