ಕೇಂದ್ರ ಸರಕಾರದ ವಿರುದ್ಧ 'ಕಿಲ್ ದ ಬಿಲ್' ಅಭಿಯಾನ

Update: 2019-01-19 05:04 GMT

ಗುವಾಹತಿ, ಜ. 19: ಬಿಜೆಪಿ ಪ್ರಾಯೋಜಿತ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ (ನೆಡಾ)ದ ಹಲವು ಅಂಗ ಪಕ್ಷಗಳು ಸೇರಿದಂತೆ ಈಶಾನ್ಯ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ವಿವಾದಿತ ಪೌರತ್ವ (ತಿದ್ದುಪಡಿ) ಮಸೂದೆ- 2016ನ್ನು ತಡೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಮೇಘಾಲಯ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಖಂಡ ಕೊರ್ನಾಡ್ ಸಂಗ್ಮಾ ಮತ್ತು ಮಿಝೋರಾಂ ಮುಖ್ಯಮಂತ್ರಿ ಹಾಗೂ ಮಿಝೋ ನ್ಯಾಷನಲ್ ಫ್ರಂಟ್ ಮುಖಂಡ ಝೊರಂತಂಗಾ ನೇತೃತ್ವದಲ್ಲಿ ಬಿಜೆಪಿ ಸೇರಿದಂತೆ ಏಳು ನೆಡಾ ಘಟಕ ಪಕ್ಷಗಳ ಸದಸ್ಯರ ನಿಯೋಗ ಹೊಸದಿಲ್ಲಿಯಲ್ಲಿ ಗೃಹಸಚಿವ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಈ ಮಸೂದೆಯನ್ನು ಈ ಭಾಗದ ಬಹುತೇಕ ಮಂದಿ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

"ಮೇಘಾಲಯ ಹಾಗೂ ಮಿಝೋರಾಂನ ನೆಡಾ ಕೂಟದ ಎಲ್ಲ ಘಟಕ ಪಕ್ಷಗಳು ಮಸೂದೆ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ವಿವಿಧ ಪಕ್ಷಗಳು, ನಾಗರಿಕ ಸಮಾಜ ಹಾಗೂ ಈ ಭಾಗದ ಜನರ ಭಾವನೆಗಳನ್ನು ನಾವು ತಿಳಿಸಿದ್ದೇವೆ. ಬಹುತೇಕ ಮಂದಿ ಈ ಮಸೂದೆ ಒಪ್ಪಿಕೊಳ್ಳುವುದಿಲ್ಲ" ಎಂದು ಸಂಗ್ಮಾ ಸ್ಪಷ್ಟಪಡಿಸಿದರು.

ಈ ಮಸೂದೆ ಬಗ್ಗೆ ಮರುಚಿಂತನೆ ನಡೆಸಿ, ಮಸೂದೆ ಜಾರಿಗೆ ತರುವ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಗೃಹಸಚಿವರನ್ನು ಒತ್ತಾಯಿಸಿದ್ದೇವೆ. ಈ ಮಸೂದೆಯನ್ನು ಪರಿಷ್ಕರಿಸುವ ಪ್ರಶ್ನೆಯೇ ಇಲ್ಲ. ಮಸೂದೆ ವಿಚಾರದಲ್ಲಿ ಮುಂದುವರಿಯದಂತೆ ಸ್ಪಷ್ಟವಾಗಿ ಒತ್ತಡ ಹಾಕಿದ್ದೇವೆ ಎಂದು ವಿವರಿಸಿದರು.

ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಈ ಕರಾಳ ಮಸೂದೆ ವಿರುದ್ಧ ಒಗ್ಗಟ್ಟಾಗಬೇಕು ಎಂದು ಸಂಗ್ಮಾ ಅಭಿಪ್ರಾಯಪಟ್ಟರು. ಈ ಬಗ್ಗೆ ಸಮಗ್ರ ಚರ್ಚೆಗೆ ಎಲ್ಲ ಏಳು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು. 64 ವರ್ಷಗಳಿಂದ ಇರುವ ಪೌರತ್ವ ಕಾಯ್ದೆಯನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗುವಂತೆ ಝೊರಂತಂಗಾ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News