ಮಂಡ್ಯ: ಜ. 28, 29ರಂದು ಮಹಾತ್ಮಗಾಂಧಿ ನರೇಗಾ ದಶಮಾನೋತ್ಸವ

Update: 2019-01-19 15:41 GMT

ಮಂಡ್ಯ, ಜ. 19: ಜಿಲ್ಲೆಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಂಡು 10 ವರ್ಷಗಳನ್ನು ಪೂರೈಸಿದ ಹಿನ್ನಲೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಮಹಾತ್ಮಗಾಂಧಿ ನರೇಗಾ ದಶಮಾನೋತ್ಸವ ಹಾಗೂ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಜ.28ರಿಂದ 2 ದಿನಗಳ ಕಾಲ ನಗರದ ಪಾಂಡುರಂಗ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ ಪುಟ್ಟಮಾದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಮಾನೋತ್ಸವ ಆಚರಿಸುವ ಮೂಲಕ ಕಾರ್ಯಕ್ರಮದ ಸಾಧಕ ಬಾಧಕ, ಅವಕಾಶಗಳು, ಕೊರತೆಗಳು, ಸಮಸ್ಯೆಗಳು ಹಾಗೂ ಉದ್ಯೋಗ ಖಾತ್ರಿಯ ಅನುಷ್ಠಾನ ಮುಂದಿರುವ ದಾರಿ ಮತ್ತು ಕೂಲಿಕಾರರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಜ. 28ರ ಬೆಳಗ್ಗೆ 11 ಗಂಟೆಗೆ ಸಿಲ್ವರ್ ಜ್ಯೂಬಿಲಿ ಉದ್ಯಾನವನದಿಂದ 2 ಸಾವಿರ ಕೂಲಿಕಾರರ ಮೆರವಣಿಗೆ ನಡೆಸಲಾಗುವುದು. ಕಾರ್ಯಕ್ರಮವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ಉದ್ಘಾಟಿಸಲಿದ್ದು, ಕೂಲಿಕಾರರ ಸಂಘದ ವಾರ್ಷಿಕ ಕ್ಯಾಲೆಂಡರ್‍ನ್ನು ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜು ಬಿಡುಗಡೆ ಮಾಡುವರು. ನರೇಗಾ ಕಾಯಕ ಜೀವಿಗಳಿಗೆ ಮಂಡ್ಯ ಜಿಪಂ ಸಿಇಓ ಕೆ.ಯಾಲಕ್ಕಿಗೌಡ ಸನ್ಮಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯ ಪ್ರಕಾಶ್‍ ಗೌಡ, ಜಿ.ಪಂ ವಿರೋಧ ಪಕ್ಷದ ನಾಯಕ ಹನುಮಂತು ಭಾಗವಹಿಸುವರು.

ಜಿಪಂ ಇಲಾಖಾಧಿಕಾರಿಗಳಾದ ಸವಿತಾ, ಮುನಿರಾಜು, ಕಾರ್ಮಿಕ ಅಧಿಕಾರಿ ನಾಗೇಂದ್ರ ಅವರುಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಜ.29ರ ಮಧ್ಯಾಹ್ನ 1ಕ್ಕೆ ನಡೆಯುವ ಸಮಾರಂಭದಲ್ಲಿ ಸಂಸದ ಎಲ್.ಆರ್.ಶಿವರಾಮೇಗೌಡ ಸಮಾರೋಪ ನುಡಿಗಳನ್ನು ಆಡುವರು. ಮುಖ್ಯ ಭಾಷಣಕಾರರಾಗಿ  ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ಹಾಗೂ ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಉಪಾಧ್ಯಕ್ಷೆ ಪಿ.ಕೆ.ಗಾಯಿತ್ರಿ ರೇವಣ್ಣ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ಬಿ.ಎಂ.ಶಿವಮಲ್ಲಯ್ಯ, ಎನ್.ಸುರೇಂದ್ರ, ಅಬ್ದುಲ್ಲಾ, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಸಹ ಕಾರ್ಯದರ್ಶಿಗಳಾದ ಸರೋಜಮ್ಮ, ಶಿವಣ್ಣ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News