ರೈಲಿನಲ್ಲಿ ಮತ್ತೆ ಸಿಗಲಿದೆ ಮಣ್ಣಿನ ಗಡಿಗೆ ಚಹಾ

Update: 2019-01-20 14:38 GMT

 ಹೊಸದಿಲ್ಲಿ, ಜ.20: ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಮತ್ತು ಪೇಪರ್ ಕಪ್‌ಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಹಿಂದೆ ರೈಲ್ವೇ ಸಚಿವರಾಗಿದ್ದ ಲಾಲೂಪ್ರಸಾದ್ ಯಾದವ್ 15 ವರ್ಷದ ಹಿಂದೆ ಪರಿಚಯಿಸಿದ್ದ ‘ಫ್ಲಾಟ್‌ ಫಾರ್ಮ್‌ ಗಳಲ್ಲಿ ಗಡಿಗೆ ಚಹಾ ’ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಚಿಂತನೆ ನಡೆಯುತ್ತಿದೆ. ರೈಲು ಪ್ರಯಾಣಿಕರಿಗೆ ಮಣ್ಣಿನ ಗಡಿಗೆ, ಲೋಟ ಮತ್ತು ತಟ್ಟೆಗಳನ್ನು ಬಳಸುವಂತೆ ವಾರಣಾಸಿ ಮತ್ತು ರಾಯ್‌ಬರೇಲಿ ನಿಲ್ದಾಣಗಳಲ್ಲಿ ಆಹಾರ ಪೂರೈಸುವವರಿಗೆ ರೈಲ್ವೇ ಸಚಿವ ಪಿಯೂಷ್ ಗೋಯಲ್ ಸೂಚಿಸಿದ್ದಾರೆ ಎಂದು ಉತ್ತರ ರೈಲ್ವೇ ಮಂಡಳಿಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದು ಪ್ರಯಾಣಿಕರಿಗೆ ತಾಜಾ ಆಹಾರದ ಅನುಭವ ನೀಡುವುದಲ್ಲದೆ ಸ್ಥಳೀಯ ಕುಂಬಾರರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಹೆಚ್ಚಿಸಲಿದೆ ಎಂದು ತಿಳಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಈ ಕುರಿತು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ(ಕೆವಿಐಸಿ) ಅಧ್ಯಕ್ಷ ವಿಕೆ ಸಕ್ಸೇನಾ ರೈಲ್ವೇ ಸಚಿವರಿಗೆ ಪತ್ರ ಬರೆದಿದ್ದರು. ಸ್ಥಳೀಯ ಕುಂಬಾರರಿಗೆ ವಿದ್ಯುತ್‌ಚಾಲಿತ ಯಂತ್ರಗಳನ್ನು ಒದಗಿಸುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಇವುಗಳಿಗೆ ಮಾರುಕಟ್ಟೆಯನ್ನು ಒದಗಿಸಬೇಕಿದ್ದು, ಗಡಿಗೆ ಚಹಾ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕೆಂದು ಅವರು ಕೋರಿದ್ದರು. ರೈಲ್ವೇ ಸಚಿವಾಲಯ ತಮ್ಮ ಕೋರಿಕೆಯನ್ನು ಒಪ್ಪಿಕೊಂಡಿರುವ ಕಾರಣ ಇದೀಗ ಲಕ್ಷಾಂತರ ಕುಂಬಾರರ ಉತ್ಪನ್ನಗಳಿಗೆ ಸಿದ್ಧ ಮಾರುಕಟ್ಟೆ ದೊರಕಲಿದೆ . ಮುಂದಿನ ದಿನದಲ್ಲಿ ಸಂಪೂರ್ಣ ರೈಲ್ವೇ ಜಾಲಕ್ಕೆ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ನಿರೀಕ್ಷೆಯಿದೆ ಎಂದವರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಪ್ರತಿನಿಧಿಸುವ ಸಂಸದ್ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಈಗಾಗಲೇ 300 ವಿದ್ಯುತ್‌ಚಾಲಿತ ಯಂತ್ರಗಳನ್ನು ಪೂರೈಸಲಾಗಿದ್ದು , ಇನ್ನೂ 1 ಸಾವಿರ ಯಂತ್ರಗಳನ್ನು ಪೂರೈಸಲಾಗುವುದು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಕ್ಷೇತ್ರವಾಗಿರುವ ರಾಯ್‌ಬರೇಲಿಯಲ್ಲಿ 100 ಯಂತ್ರಗಳನ್ನು ಪೂರೈಸಲಾಗಿದ್ದು ಇನ್ನೂ 700 ಯಂತ್ರಗಳನ್ನು ಶೀಘ್ರ ಪೂರೈಸಲಾಗುವುದು.

ಈ ವರ್ಷ ಒಟ್ಟಾರೆ 6 ಸಾವಿರ ವಿದ್ಯುತ್‌ಚಾಲಿತ ಯಂತ್ರಗಳನ್ನು ಪೂರೈಸುವ ಯೋಜನೆಯಿದೆ ಎಂದು ಸಕ್ಸೇನಾ ತಿಳಿಸಿದ್ದಾರೆ. ‘ಕುಲ್ಹಡ್’ ಎಂದು ಕರೆಯಲಾಗುವ ಪರಿಸರ ಸ್ನೇಹೀ ಮಣ್ಣಿನ ಗಡಿಗೆಯಲ್ಲಿ ರೈಲ್ವೇ ಪ್ರಯಾಣಿಕರಿಗೆ ಚಾ, ಆಹಾರ ಪೂರೈಸುವ ವ್ಯವಸ್ಥೆಯನ್ನು 2004ರಲ್ಲಿ ಅಂದಿನ ರೈಲ್ವೇ ಸಚಿವ ಲಾಲೂಪ್ರಸಾದ್ ಯಾದವ್ ಜಾರಿಗೆ ತಂದಿದ್ದರು. ‘ಕುಲ್ಹಡ್’ ಖರೀದಿಗೆ ರೈಲ್ವೇ ಬಜೆಟ್‌ನಲ್ಲಿ ಪ್ರತ್ಯೇಕ ಮೊತ್ತ ವಿಂಗಡಣೆ ಮಾಡಿಲ್ಲದಿದ್ದರೂ, ಇದಕ್ಕೆ ಬೇಕಾದ ಸುಮಾರು 1,072 ಕೋಟಿ ರೂ. ಮೊತ್ತವನ್ನು ‘ಇತರ ಆದಾಯ’ ವಿಭಾಗದಿಂದ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಗಡಿಗೆ ಹಾಗೂ ಇತರ ಮಣ್ಣಿನ ಪಾತ್ರೆಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಆಕ್ಷೇಪ ಪ್ರಯಾಣಿಕರಿಂದ ಹಾಗೂ ಕ್ಯಾಟರಿಂಗ್ ಸಂಸ್ಥೆಗಳಿಂದ ವ್ಯಕ್ತವಾಗಿತ್ತು ಮತ್ತು ಈ ವ್ಯವಸ್ಥೆ ಕ್ರಮೇಣ ಆಕರ್ಷಣೆ ಕಳೆದುಕೊಂಡಿತ್ತು.

ನಂತರದ ದಿನಗಳಲ್ಲಿ ಬಹುತೇಕ ಎಲ್ಲಾ ನಿಲ್ದಾಣಗಳಲ್ಲೂ ಪ್ಲಾಸ್ಟಿಕ್ ಮತ್ತು ಪೇಪರ್ ಲೋಟಗಳನ್ನು ಬಳಸುವ ಪ್ರಕ್ರಿಯೆ ಮರುಚಾಲನೆ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News