ಅಮಿತ್ ಶಾ, ಮೋದಿ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದಾರೆ: ಕೇಜ್ರಿವಾಲ್

Update: 2019-01-20 16:36 GMT

ಹೊಸದಿಲ್ಲಿ, ಜ. 20: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ರವಿವಾರ ತೀವ್ರ ವಾಗ್ದಾಳಿ ನಡೆಸಿದ ಆಪ್‌ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದಿದ್ದಾರೆ.

‘‘ಅಮಿತ್ ಶಾ ಹಾಗೂ ಮೋದಿ ದೇಶವನ್ನು ನಾಶ ಮಾಡಿದ್ದಾರೆ. ಅವರು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿದ್ದಾರೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ, ದೇಶ ವಿಭಜನೆಯಾಗಲಿದೆ. ಅವರು ಸಂವಿಧಾನ ಉಳಿಯಲು ಅವಕಾಶ ನೀಡಲಾರರು’’ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಆಯೋಜಿಸಲಾದ ರ್ಯಾಲಿ ಉದ್ದೇಶಿಸಿ ಮಾತನಾಡುವ ಮುನ್ನ ಅವರು ಪಂಜಾಬ್‌ನ ಸಂಗ್ರೂರ್ ರೈಲ್ವೆ ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದರು. ಅಕಾಲಿ ದಳ ಹಾಗೂ ಕಾಂಗ್ರೆಸ್ ಬಗ್ಗೆ ಪಂಜಾಬ್ ಜನತೆ ಅಸಮಾಧಾನ ಹೊಂದಿದ್ದಾರೆ. ಈ ಎರಡು ಪಕ್ಷಗಳು ಜನರ ಭರವಸೆ ಈಡೇರಿಸಿಲ್ಲ ಎಂದು ಅವರು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಆಪ್ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. 10-12 ದಿನಗಳಲ್ಲಿ ನಾವು ಅಭ್ಯರ್ಥಿಗಳ ಹೆಸರು ಘೋಷಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಪಂಜಾಬ್‌ನಲ್ಲಿ ದಿಲ್ಲಿ ಮಾದರಿ ಅನುಷ್ಠಾನಕ್ಕೆ ತರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾವು ಪಂಜಾಬ್‌ನಲ್ಲಿ ದಿಲ್ಲಿ ಮಾದರಿ ಅನುಷ್ಠಾನಗೊಳಿಸಲಿದ್ದೇವೆ. ದಿಲ್ಲಿಯಲ್ಲಿ ಮಾಡಿದ ಕೆಲವು ಉತ್ತಮ ಕೆಲಸಗಳನ್ನು ಪಂಜಾಬ್‌ನಲ್ಲಿ ಕೂಡ ಮಾಡಲಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News