‘ಶಾಲೆಗೆ ಬನ್ನಿ ಶನಿವಾರ’ ಮರು ಆರಂಭಕ್ಕೆ ಚಿಂತನೆ

Update: 2019-01-21 15:53 GMT

ಬೆಂಗಳೂರು, ಜ.21: ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ದೃಷ್ಟಿಯಿಂದ ಜಾರಿಗೆ ತಂದಿದ್ದ ‘ಶಾಲೆಗೆ ಬನ್ನಿ ಶನಿವಾರ’ ಕಾರ್ಯಕ್ರಮ ಮರು ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಸಾರ್ವಜನಿಕರ ಸಹಭಾಗಿತ್ವದಲ್ಲಿ ಸರಕಾರಿ ಶಾಲೆಯ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸುವ ಉದ್ದೇಶದಿಂದ 2015ರಲ್ಲಿ ಶಾಲೆಗೆ ಬನ್ನಿ ಶನಿವಾರ ಕಾರ್ಯಕ್ರಮ ಆರಂಭಿಸಲಾಗಿತ್ತು. ಬೆಂಗಳೂರು ನಗರ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ, ಕಾರ್ಯಕ್ರಮವನ್ನು ಯಶಸ್ಸಿಯಾಗಿ ನಡೆಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಿರಲಿಲ್ಲ. ಆದುದರಿಂದಾಗಿ, 2016ರಲ್ಲಿ ಯೋಜನೆ ಸ್ಥಗಿತಗೊಂಡಿತ್ತು. ಇದೀಗ ಸಾರ್ವಜನಿಕರ ಒತ್ತಾಯದಂತೆ ಮರು ಆರಂಭ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಮರು ಆರಂಭದ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಪ್ರಾರಂಭಿಸುವ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಶನಿವಾರ ಖಾಸಗಿ ವಲಯದಲ್ಲಿ ಬಹುತೇಕರಿಗೆ ರಜೆ ಇರುವುದರಿಂದ ಸರಕಾರಿ ಶಾಲೆಗೆ ಬಂದು ಬೆಳಗ್ಗೆ 7.30ರಿಂದ ಮಧ್ಯಾಹ್ನ 12ಗಂಟೆ ನಡುವೆ ತರಗತಿ ನಡೆಸಬಹುದಾಗಿದೆ. ಅವರ ಇಚ್ಛೆಯ ಸರಕಾರಿ ಶಾಲೆ ಹಾಗೂ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಶಾಲಾ ಮುಖ್ಯಸ್ಥರ ಅನುಮತಿ ಪಡೆದು ಬೋಧನೆ ಮಾಡಬಹುದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News