ಶಿವಕುಮಾರ ಸ್ವಾಮೀಜಿಯ ಅಗಲಿಕೆ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ: ಸಿಎಂ ಕುಮಾರಸ್ವಾಮಿ

Update: 2019-01-21 16:42 GMT

ತುಮಕೂರು,ಜ.21: ಹಲವಾರು ದಿನಗಳಿಂದ ವಯೋ ಸಹಜ ಕಾಯಿಲೆಗೆ ತುತ್ತಾಗಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದ ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಬೆಳಗ್ಗೆ ನಿಧನ ಹೊಂದಿದ್ದು, ರಾಜ್ಯಾದ್ಯಂತ 3 ದಿನಗಳ ಶೋಕಾಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಮಠದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಇಂದು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಪಾರ್ಥೀವ ಶರೀರವನ್ನು ಮಠದ ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಮಂಗಳವಾರ ಸಂಜೆವರೆಗೂ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ಗೌರವಾರ್ಥವಾಗಿ ರಾಜ್ಯಾದ್ಯಂತ ಶೋಕಾಚರಣೆ ಅವಧಿಯಲ್ಲಿ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಜರುಗುವುದಿಲ್ಲ ಹಾಗೂ ರಾಷ್ಟ್ರಧ್ವಜ ವನ್ನು ಹಾರಿಸಲ್ಪಡುವ ಸರಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂದು ತಿಳಿಸಿದರು.

ಪರಮಪೂಜ್ಯ ಸ್ವಾಮೀಜಿಯವರ ಕ್ರಿಯಾಸಮಾಧಿಯ ಕಾರ್ಯಗಳು, ಅಂತ್ಯಸಂಸ್ಕಾರವನ್ನು ಮಂಗಳವಾರ ಸಂಜೆ ನಡೆಸಲು ನಿಶ್ಚಯಿಸಲಾಗಿದೆ. ಅಂತಿಮ ದರ್ಶನವನ್ನು ಶಾಂತಿಯುತವಾಗಿ ನಡೆಸುವ ಹಿನ್ನಲೆಯಲ್ಲಿ ಸರಕಾರದಿಂದ ಮುಂಜಾಗ್ರತಾ ಕ್ರಮವಾಗಿ ಸಕಲ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದಷ್ಟು ನಷ್ಟ ಉಂಟಾಗಿದೆ. ಇವರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ. ಲಕ್ಷಾಂತರ ಮಕ್ಕಳಿಗೆ ವಸತಿ, ಶಿಕ್ಷಣ, ಅನ್ನ ದಾಸೋಹ ನೀಡಿದ ಪರಮಪೂಜ್ಯ ಶಿವಕುಮಾರ ಸ್ವಾಮೀಜಿ ಅವರನ್ನು ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು. 

ಮಂಗಳವಾರ ರಜೆ: ಶ್ರೀಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುವಾಗುವಂತೆ ಶಾಲಾ ಕಾಲೇಜುಗಳು ಸೇರಿ ಎಲ್ಲಾ ಸರಕಾರಿ ಕಚೇರಿಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ ಎಂದರು. 

ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಮಾತನಾಡಿ, ಸಕಲ ಸರಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅವರನ್ನು ಆಧುನಿಕ ಬಸವಣ್ಣ ಎಂದು ಇಡೀ ದೇಶ ಒಪ್ಪಿ ಅಪ್ಪಿಕೊಂಡಿದೆ. ಶ್ರೀಗಳು ತಮ್ಮ 111 ವರ್ಷಗಳ ಜೀವಿತ ಅವಧಿಯಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯ. ಅವರ ಆದರ್ಶ, ತತ್ವ, ಮಾರ್ಗದರ್ಶನಗಳು ನಮಗೆಲ್ಲರಿಗೂ ದಾರಿ ದೀಪವಾಗಿವೆ. ಕೇಂದ್ರ ಸರಕಾರವು ಶೀಘ್ರವಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಮನವಿ ಮಾಡಿದರು. 

ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಪವಾಡ ಪುರುಷರಾದ ಶ್ರೀಗಳು ಸುಮಾರು 90 ವರ್ಷಗಳ ಕಾಲ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಿದ ದಾರ್ಶನಿಕರು. ಸಾಮಾನ್ಯ ಜನರೂ ಕೂಡ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲು ನಗರದಲ್ಲಿ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು. 

ಪರ್ಯಾಯ ಮಾರ್ಗ: ಐಜಿ ದಯಾನಂದ್ ಮಾತನಾಡಿ, ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಠಕ್ಕೆ ಆಗಮಿಸಲು ರಾಷ್ಟ್ರೀಯ ಹೆದ್ದಾರಿ-4 ಒಂದೇ ಸಂಚಾರಿ ಮಾರ್ಗವಿದ್ದು, ಸಂಚಾರವನ್ನು ಸುಗಮವಾಗಿಸಲು ರಸ್ತೆ ಮಾರ್ಗವನ್ನು ಬದಲಾಯಿಸಲಾಗಿದೆ. ಪೂನಾ, ಶಿರಾ ಮಾರ್ಗದ ಕಡೆ ಹೋಗುವ ವಾಹನಗಳನ್ನು ಡಾಬಸ್‍ಪೇಟೆ ಜಂಕ್ಷನ್‍ನಿಂದ ಹಾಗೂ ಶಿವಮೊಗ್ಗ ಕಡೆ ಹೋಗುವ ವಾಹನಗಳಿಗೆ ನೆಲಮಂಗಲ ಜಂಕ್ಷನ್‍ನಿಂದ ಡೈವರ್ಟ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ-4ನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಮಂತ್ರಿಗಳು, ವಿವಿಧ ಗಣ್ಯರು ಸಂಚರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಖಾಸಗಿ, ಇತರೆ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ-4ನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಮನವಿ ಮಾಡಿದರು. 

ಸಾರ್ವಜನಿಕ ದರ್ಶನ ಮಾಡುವ ಭಕ್ತರಿಗೆ ರಾಗಿ ಹೊಲ ಸೇರಿದಂತೆ 3 ಕಡೆ ಊಟದ ವ್ಯವಸ್ಥೆ, ಕುಡಿಯುವ ನೀರು ಹಾಗೂ ಮೊಬೈಲ್ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದ್ದು,ಉತ್ತರ ಕರ್ನಾಟಕದಿಂದ ಬರುವ ಭಕ್ತರಿಗೆ ಸರ್ಕಾರಿ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರ ಅನುಕೂಲಕ್ಕಾಗಿ ಸರ್ಕಾರಿ ಬಸ್‍ನಿಲ್ದಾಣ ರೈಲು ನಿಲ್ದಾಣದಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.  
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 3500 ಪೊಲೀಸ್ ಸಿಬ್ಬಂದಿ, 10  ಪೊಲೀಸ್ ವರಿಷ್ಠಾಧಿಕಾರಿಗಳು, 30 ಕೆಎಸ್‍ಆರ್‍ಪಿ ತುಕಡಿ, ವಿವಿಧ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 

ಶ್ರೀ ಸಿದ್ಧಗಂಗಾ ಮಠಕ್ಕೆ ಬರುವ ಮಾರ್ಗಗಳು: ಬೆಂಗಳೂರು ಕಡೆಯಿಂದ ಸಿದ್ದಗಂಗಾ ಮಠಕ್ಕೆ ಬರುವ ಸಾರ್ವಜನಿಕರು ತುಮಕೂರು-ಗುಬ್ಬಿ ರಿಂಗ್ ರಸ್ತೆ ಮೂಲಕ ಬಂದು ರೋಟಿಗರ್ ಬಳಿ ಬಲಕ್ಕೆ ತಿರುಗಿ ಬಟವಾಡಿ 80 ಅಡಿ ರಸ್ತೆ ಮೂಲಕ ಮಿರ್ಜಿ ಪೆಟ್ರೋಲ್ ಬಂಕ್ ಬಳಿ ಬಂದು ಎಡಗಡೆ ತಿರುಗಿ, ಬಟವಾಡಿ ವೈ ಜಂಕ್ಷನ್ ಮೂಲಕ ಬಟವಾಡಿ ಅಂಡರ್ ಬ್ರಿಡ್ಜ್ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ, ಇಸ್ರೋ ಆವರಣದಲ್ಲಿ (ಹೆಚ್‍ಎಂಟಿ) ವಾಹನಗಳನ್ನು ನಿಲುಗಡೆ ಮಾಡಿ, ಅಲ್ಲಿಂದ ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್ ವಾಹನಗಳ ಮುಖಾಂತರ ಮಠಕ್ಕೆ ತೆರಳಬಹುದು. 

ಶಿವಮೊಗ್ಗ ಕಡೆಯಿಂದ ಮಠಕ್ಕೆ ಬರುವ ಭಕ್ತಾದಿಗಳು ಬಿ.ಹೆಚ್.ರಸ್ತೆ ಮುಖಾಂತರ ಸರಕಾರಿ ಜ್ಯೂನಿಯರ್ ಕಾಲೇಜ್ ಮೈದಾನಕ್ಕೆ ಬಂದು, ಅಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್ ಮುಖಾಂತರ ಮಠಕ್ಕೆ ತೆರಳಬಹುದು. 

ಶಿರಾ ಕಡೆಯಿಂದ ಸಿದ್ದಗಂಗಾ ಮಠಕ್ಕೆ ಬರುವ ಭಕ್ತಾಧಿಗಳ ಭಾರಿ ವಾಹನಗಳು (ಹೆಚ್.ಎಂ.ವಿ.)ರಂಗಾಪುರ ಬ್ರಿಡ್ಜ್ ಬಳಿ ಸರ್ವೀಸ್ ರಸ್ತೆ ಮುಖಾಂತರ ಶ್ರೀದೇವಿ ಕಾಲೇಜ್ ರಸ್ತೆ ಮೂಲಕ ಅಶೋಕ ರಸ್ತೆ, ಬಿ.ಹೆಚ್.ರಸ್ತೆ ಮುಖಾಂತರ ಸರ್ಕಾರಿ ಜ್ಯೂನಿಯರ್ ಕಾಲೇಜ್ ಮೈದಾನಕ್ಕೆ ಬಂದು, ಅಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್ ಮುಖಾಂತರ ಮಠಕ್ಕೆ ತೆರಳಬಹುದು. ಲಘು ವಾಹನಗಳು ಅಕ್ಕತಂಗಿ ಕೆರೆ ಬ್ರಿಡ್ಜ್ ಬಳಿ ಸರ್ವೀಸ ರಸ್ತೆ ಮುಖಾಂತರ ದೇವರಾಯಪಟ್ಟಣದ ಮೂಲಕ ಬಸವಣ್ಣ ದೇವಸ್ಥಾನದ ಹಿಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ, ಅಲ್ಲಿಂದ ಮಠಕ್ಕೆ ತೆರಳುವುದು. 

ಕುಣಿಗಲ್ ಕಡೆಯಿಂದ ಮಠಕ್ಕೆ ಬರುವ ಭಕ್ತಾದಿಗಳು ತುಮಕೂರು ನಗರಕ್ಕೆ ಕುಣಿಗಲ್ ಸರ್ಕಲ್ ಮೂಲಕ ಪ್ರವೇಶಿಸಿ ಲಕ್ಕಪ್ಪ ಸರ್ಕಲ್, ಬಿ.ಹೆಚ್.ರಸ್ತೆ ಮುಖಾಂತರ ಸರಕಾರಿ ಜ್ಯೂನಿಯರ್ ಕಾಲೇಜ್ ಮೈದಾನಕ್ಕೆ ಬಂದು ಅಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ, ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್ ಮುಖಾಂತರ ಮಠಕ್ಕೆ ತೆರಳಬಹುದು.

ತುಮಕೂರು ನಗರದಿಂದ ಸಿದ್ದಗಂಗಾ ಮಠದ ಕಡೆ ಬರುವ ಭಕ್ತಾಧಿಗಳು ಬಟವಾಡಿ ಅಂಡರ್ ಬ್ರಿಡ್ಜ್ ಮುಖಾಂತರ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ, ಎಪಿಎಂಸಿ ಯಾರ್ಡ್‍ನ ಆವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಅಲ್ಲಿಂದ ನಿಯೋಜಿಸಲಾಗಿರುವ ಶೆಟಲ್ ಸರ್ವೀಸ್(ಬಸ್) ವಾಹನಗಳ ಮುಖಾಂತರ ಮಠಕ್ಕೆ ತೆರಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News