ಸಿದ್ಧಗಂಗಾ ಶ್ರೀ ನಿಧನ: ಕಂಬನಿ ಮಿಡಿದ ಸಚಿವ ದೇಶಪಾಂಡೆ

Update: 2019-01-21 17:00 GMT

ಬೆಂಗಳೂರು, ಜ.21: ಶತಾಯುಷಿ, ತ್ರಿವಿಧ ದಾಸೋಹಿ, ಆಧುನಿಕ ಜಗತ್ತಿನ ಶ್ರೇಷ್ಟ ಸಂತ, ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ.ಶಿವಕುಮಾರ ಸ್ವಾಮೀಜಿಗಳ ದೇಹತ್ಯಾಗದಿಂದ ಜ್ಞಾನ, ಸೇವೆ ಮತ್ತು ದಾಸೋಹಗಳ ಯುಗವೊಂದು ಅಂತ್ಯಗೊಂಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.

ಸಿದ್ಧಗಂಗಾ ಶ್ರೀ ನಿಧನರಾಗಿರುವುದಕ್ಕೆ ತೀವ್ರ ಶೋಕ ವ್ಯಕ್ತಪಡಿಸುತ್ತಾ, 'ತುತ್ತು ಅನ್ನದ ಹಿಂದೆ ಇರುವ ಸಾವಿರಾರು ಮಂದಿಯ ಶ್ರಮದ ನಿಜದ ಅರ್ಥವನ್ನು ಸಮಸ್ತ ಭಕ್ತ ಸಮೂಹ, ಅಭಿಮಾನಿ ಬಳಗ ಹಾಗೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿಜವಾದ ನೆಲೆಯಲ್ಲಿ ಬಿತ್ತಿದ ಈ ಮಹಾನ್ ಚೇತನ ಸಮಾಜದಲ್ಲಿನ ಸಕಲರನ್ನೂ ಸಮಾನವಾಗಿ ಕಾಣುತ್ತಿದ್ದರಲ್ಲದೆ, ದೀನ-ದಲಿತರಿಗೆ ಆತ್ಮಶಕ್ತಿ ತುಂಬುವ ಮೂಲಕ ಅವರೆಲ್ಲರ ಸಮಗ್ರ ಸಬಲೀಕರಣಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡಿದ್ದರು. 

ಜ್ಞಾನ, ಆಶ್ರಯ ಮತ್ತು ಅನ್ನದಾಸೋಹದ ನಿಜವಾದ ಅರ್ಥದ ಕ್ರಾಂತಿ ಪುರುಷರಾಗಿದ್ದ ಶ್ರೀಯುತರು ಬಡತನದಿಂದ ಸಂಕಷ್ಟಕ್ಕೆ ಸಿಲುಕಿ ಕೊಂಡಂಥವರನ್ನು ಶ್ರೀಮಠಕ್ಕೆ ಕರೆತಂದು, ಅವರನ್ನು ಸಕಲ ವಿಧಗಳಲ್ಲೂ ಪೋಷಿಸುತ್ತಿದ್ದರು ಎಂದು ದೇಶಪಾಂಡೆ ಶ್ರೀಗಳನ್ನು ನೆನಪಿಸಿಕೊಂಡಿದ್ದಾರೆ.

ಶ್ರೀಯುತರು ನಿಧನರಾಗಿರುವುದರಿಂದ ಅಪಾರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದ್ದು, ಸಮಾಜದ ಪ್ರತಿಯೊಬ್ಬರೂ ಅನಾಥ ಭಾವವನ್ನು ಅನುಭವಿಸುತ್ತಿದ್ದಾರೆ ಎಂದು ಸಚಿವರು ಶೋಕ ವ್ಯಕ್ತಪಡಿಸಿದ್ದಾರೆ. 

ಪರಮಾತ್ಮನು ಶ್ರೀಗಳ ಆತ್ಮಕ್ಕೆ ಶಾಂತಿಯನ್ನು ನೀಡಲಿ ಮತ್ತು ಶ್ರೀಗಳ ಅಪಾರ ಭಕ್ತವೃಂದಕ್ಕೆ ಅವರ ದೇಹತ್ಯಾಗದ ನೋವನ್ನು ಭರಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಮತ್ತು ಅವರ ಮಹಾನ್ ಚೇತನ ನಮಗೆಲ್ಲರಿಗೂ ಸದಾ ದಾರಿ ದೀಪವಾಗಿರಲೆಂದು ಪ್ರಾರ್ಥಿಸುತ್ತೇನೆ ಎಂದು ದೇಶಪಾಂಡೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News