ಶಿವಕುಮಾರ ಸ್ವಾಮೀಜಿ ನಿಧನ: ಸಚಿವ ಜಿ.ಟಿ.ದೇವೇಗೌಡ, ಸಂಸದ ಆರ್.ಧ್ರುವನಾರಾಯಣ ಸಂತಾಪ

Update: 2019-01-21 17:27 GMT

ಮೈಸೂರು,ಜ.21: ಶತಾಯುಷಿ, ತ್ರಿವಿದ ದಾಸೋಹಿ, ಕಾಯಕ ಯೋಗಿ, ಕರ್ನಾಟಕ ರತ್ನ ಡಾ.ಶ್ರೀಶಿವಕುಮಾರ ಸ್ವಾಮೀಜಿಯ ಅಗಲಿಕೆಯಿಂದ ಈ ನಾಡು ಬಡವಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತೀವ್ರ ಸಂತಾಪ ಸೂಚಿಸಿದ್ದಾರೆ.

ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿ, 12ನೇ ಶತಮಾನದ ಯುಗಪುರುಷ, ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶ್ರೀಗಳು, ಸಿದ್ದಗಂಗಾ ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠವನ್ನು ಮುನ್ನಡೆಸಿದ್ದರು. ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಶ್ರೀಗಳು ಕಾರಣವಾಗಿದ್ದರು. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನ್ನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು. ಇವರ ಆತ್ಮಕ್ಕೆ ತಾಯಿ ಶ್ರೀಚಾಮುಂಡೇಶ್ವರಿ ಶಾಂತಿ ನೀಡಲಿ. ಅಸಂಖ್ಯಾತ ಭಕ್ತರ ಸಮೂಹಕ್ಕೆ ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿ ಅವರು ಮಾಡಿದ ಶಿಕ್ಷಣ ಕ್ರಾಂತಿಯನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲವೆಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.

ಮೈಸೂರಿನ ಜಲದರ್ಶಿನಿಯಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಯಿಂದ ದೇಶ ಹಾಗೂ ರಾಜ್ಯಕ್ಕೆ ಅಪಾರ ನಷ್ಟವಾಗಿದೆ. ಅವರು ಶಿಕ್ಷಣ ಹಾಗೂ ದಾಸೋಹದ ಮೂಲಕ ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದರು. ಸಂಸದರೆಲ್ಲ ಸೇರಿ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರಿಗೆ ಪತ್ರದ ಮೂಲಕ ಭಾರತರತ್ನ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಶ್ರೀಗಳು ಚಾಮರಾಜನಗರ ಜಿಲ್ಲೆಗೆ ಎರಡು ಬಾರಿ ಭೇಟಿ ಕೊಟ್ಟಿದ್ದರು ಎಂದು ನೆನಪು ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News