ಸೂತಕದ ಮನೆಯಲ್ಲಿ 'ಸಹ್ಯಾದ್ರಿ ಉತ್ಸವ' ಬೇಡ: ಶಿವಮೊಗ್ಗ ಜಿಲ್ಲಾಡಳಿತಕ್ಕೆ ಪ್ರಗತಿಪರರ ಮನವಿ

Update: 2019-01-21 17:34 GMT

ಶಿವಮೊಗ್ಗ, ಜ. 21: 'ಮಂಗನ ಕಾಯಿಲೆಯಿಂದ ಜಿಲ್ಲೆಯ ಹಲವೆಡೆ ಸಾವು-ನೋವು ಸಂಭವಿಸಿದೆ. ಈ ಕಾರಣದಿಂದ ಸೂತಕದ ಮನೆಯಲ್ಲಿ ಸಂಭ್ರಮದ ಸಹ್ಯಾದ್ರಿ ಉತ್ಸವ ಆಚರಣೆ ಸರಿಯಲ್ಲ, ಉತ್ಸವವನ್ನು ಮುಂದೂಡಬೇಕು' ಎಂದು ಪ್ರಗತಿಪರ ಚಿಂತಕರು-ಸಾಹಿತಿಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. 

ಪ್ರಮುಖರಾದ ಪ್ರೋ.ರಾಜೇಂದ್ರ ಚೆನ್ನಿ, ಪ್ರೋ.ಶ್ರೀಕಂಠ ಕೂಡಿಗೆ, ಅಕ್ಷತಾ ಹುಂಚದಕಟ್ಟೆ, ಪ್ರೊ.ಎಂ.ಬಿ.ನಟರಾಜ್, ಶಶಿ ಸಂಪಳ್ಳಿರವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 'ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಬೇಕು. ನಾಗರಿಕರ ಸಂಕಷ್ಟಕ್ಕೆ ನೆರವಾಗುವ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದರು. 

ಸಂಕಷ್ಟದಲ್ಲಿದ್ದಾರೆ: ಮಂಗನ ಕಾಯಿಲೆ ಎಂದು ಕರೆಯಿಸಿಕೊಳ್ಳುವ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‍ಡಿ) ರೋಗದಿಂದ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ ಹಾಗೂ ಶಿಕಾರಿಪುರ ಭಾಗದಲ್ಲಿ ಸಾವಿರಾರು ಜನರು ತೊಂದರೆ ಎದುರಿಸುತ್ತಿದ್ದಾರೆ. ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. 
ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇವಲ 20 ದಿನದಲ್ಲಿ 12 ಮಂದಿ ಕೆಎಫ್‍ಡಿಗೆ ಬಲಿಯಾಗಿದ್ದಾರೆ. ಅಂದಾಜು 250 ಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದೆ. ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರೋ. ರಾಜೇಂದ್ರ ಚೆನ್ನಿಯವರು ತಿಳಿಸಿದರು. 

ಸಾಗರ ತಾಲೂಕಿನ ಹಲವು ಭಾಗಗಳಲ್ಲಿ ಪ್ರತಿನಿತ್ಯ ಮಂಗಗಳು ಸಾಯುತ್ತಿವೆ. ನೂರಾರು ಜನ ಶಂಕಿತ ಸೋಂಕಿಗೆ ಒಳಗಾಗುತ್ತಿದ್ದಾರೆ. ಕಾಡಂಚಿನ ಜನ ಗುಳೆ ಹೋಗುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಸೋಂಕು ಹರಡುವ ಭೀತಿ ಎದುರಾಗಿದೆ. ಕೆಲವು ಕುಟುಂಬಗಳ ಮಕ್ಕಳು ಅನಾಥರಾಗುವಂತಾಗಿದೆ ಎಂದು ಹೇಳಿದರು. ಕೆಎಫ್‍ಡಿಯು ವ್ಯಾಪಕವಾಗಿ ಹರಡುತ್ತಿದ್ದರೂ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಂಡಿಲ್ಲ. ಸ್ಥಳೀಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಹೊರತಾಗಿ, ಜಿಲ್ಲಾಡಳಿತ ಹಂತದ ಅಧಿಕಾರಿಗಳು ಗಂಭೀರ ಗಮನಹರಿಸಿಲ್ಲ. ಆಡಳಿತ ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯದಿಂದ ಕೇವಲ 1 ತಿಂಗಳಲ್ಲಿ 4 ತಾಲೂಕುಗಳಿಗೆ ಸೋಂಕು ವ್ಯಾಪಿಸುವಂತಾಗಿದೆ ಎಂದು ದೂರಿದ್ದಾರೆ. 

ಸಾಗರ ತಾಲೂಕುವೊಂದರಲ್ಲಿಯೇ ಮುಂಜಾಗ್ರತಾ ಲಸಿಕೆ ಹಾಕಲು 1.5 ಲಕ್ಷ ಲಸಿಕೆ ಅಗತ್ಯವಿದೆ. ಆದರೆ ಆರೋಗ್ಯ ಇಲಾಖೆಯ ಮಾಹಿತಿ ಅನುಸಾರ ಕೇವಲ 15 ಸಾವಿರ ಲಸಿಕೆ ಲಭ್ಯವಿದೆ. ರೋಗ ಪತ್ತೆಗೆ ಅಗತ್ಯ ಪ್ರಯೋಗಾಲಯ ತೆರೆಯಲು ಕೂಡ ಜಿಲ್ಲಾಡಳಿತ ಆಸಕ್ತಿ ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮಂಗನ ಕಾಯಿಲೆ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಕೂಡಲೇ ಸಹ್ಯಾದ್ರಿ ಉತ್ಸವ ಮುಂದೂಡಬೇಕಿದೆ. ಜನ ನೋವಿನಲ್ಲಿರುವಾಗ ಮುದ್ದೆ ಇಲ್ಲದ ರೋಗದ ದವಡೆಗೆ ಸಿಲುಕಿ ಸರಣಿ ಸಾವುಗಳು ಸಂಭವಿಸುತ್ತಿರುವಾಗ ಸೂತಕದ ಮನೆಯಲ್ಲಿ ಸಂಭ್ರಮ ಪಡುತ್ತಿರುವುದು ಸರಿಯಲ್ಲ. ಈ ಕಾರಣದಿಂದ ಉತ್ಸವ ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News