ಮುಡಿಪು ಕೆನರಾ ಕೈಗಾರಿಕಾ ಪ್ರದೇಶದ 1ನೆ ಹಂತಕ್ಕೆ 585 ಎಕರೆ ಪ್ರದೇಶ ಭೂಸ್ವಾಧೀನ: ಸಚಿವ ಜಾರ್ಜ್

Update: 2019-01-22 15:54 GMT

ಬೆಂಗಳೂರು, ಜ.22: ಕೆಐಎಡಿಬಿಯು ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಬಳಿ ಕೆನರಾ ಕೈಗಾರಿಕಾ ಪ್ರದೇಶದ 1ನೆ ಹಂತಕ್ಕಾಗಿ ಒಟ್ಟು 585 ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಂಡು ರಸ್ತೆ, ಚರಂಡಿ, ವಿದ್ಯುತ್ ಸೌಲಭ್ಯವನ್ನು ಒದಗಿಸುತ್ತಿದೆ. ಆದರೆ, ಈ ಪ್ರದೇಶದಲ್ಲಿ ಕೈಗಾರಿಕೆಯನ್ನು ಸ್ಥಾಪಿಸಲು ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಬರುತ್ತಿಲ್ಲ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. 

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಬಿ.ಎಂ.ಫಾರೂಖ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ಒಟ್ಟು 51 ನಿವೇಶನಗಳ 404-60 ಎಕರೆ ಜಮೀನು ಹಂಚಿಕೆಗೆ ಲಭ್ಯವಿದ್ದು, ಈ ಪೈಕಿ ಮೂರು ಘಟಕಗಳಿಗೆ ಒಟ್ಟು 114-16 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿದೆ. ಇನ್ನು 290-44 ಎಕರೆ ಜಮೀನು ಹಂಚಿಕೆಗೆ ಲಭ್ಯವಿರುತ್ತದೆ ಎಂದು ಹೇಳಿದರು. ಹಂಚಿಕೆ ಪಡೆದ ಘಟಕಗಳ ಪೈಕಿ ಕೆಎಸ್‌ಆರ್‌ಪಿ ಮಂಗಳೂರು 50 ಎಕರೆ ಮತ್ತು ಜಿಲ್ಲಾ ಕಾರಾಗೃಹ ಇಲಾಖೆ, ಮಂಗಳೂರು 63-89 ಎಕರೆ ಪ್ರದೇಶದಲ್ಲಿ ತಮ್ಮ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾಗಿರುತ್ತದೆ. ಇನ್ನುಳಿದ ಒಬ್ಬ ಉದ್ದಿಮೆದಾರರಾದ ಮೆ.ಕೋಸ್ಟಲ್ ರೆಫ್ರಿಜರೇಷನ್ ಆ್ಯಂಡ್ ಫ್ಯಾಬ್ರಿಕೇಟರ್ಸ್‌ ಯೋಜನೆ ಅನುಷ್ಠಾನಗೊಳಿಸಲು ಕಾಲಾವಕಾಶವಿರುತ್ತದೆ ಎಂದು ಹೇಳಿದರು.

ಈ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ರಸ್ತೆ, ಚರಂಡಿ ಅಭಿವೃದ್ಧಿಪಡಿಸಲಾಗಿದೆ. ಮುಡಿಪುನಿಂದ ಕೈಗಾರಿಕಾ ಪ್ರದೇಶಕ್ಕೆ 1.20 ಕಿ.ಮೀ ಉದ್ದದ 24.00 ಮೀಟರ್ ಅಗಲದ ಸಂಪರ್ಕ ರಸ್ತೆಯ ಗಾಮಗಾರಿಯನ್ನು ಕೈಗೆತ್ತಿಗೊಳ್ಳಲಾಗುವುದು. ಸಾಲೆತ್ತೂರು ಸಬ್-ಸ್ಟೇಷನ್‌ನಿಂದ ಕೆನರಾ ಕೈಗಾರಿಕಾ ಪ್ರದೇಶಕ್ಕೆ 11ಕೆವಿ ಎಚ್‌ಟಿ ಫೀಡರ್ ಲೈನ್ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿದ್ದು, ಕಾಮಗಾರಿಯು ಪೂರ್ಣಗೊಂಡನಂತರ ಕೈಗಾರಿಕಾ ಪ್ರದೇಶಕ್ಕೆ 4 ಮೆಗಾ ವ್ಯಾಟ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಕೆಐಎಡಿಬಿಯು ಬಂಟ್ವಾಳ ತಾಲೂಕಿನ ಪಜೀರು ಮತ್ತು ಕೈರಂಗಳ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಐಟಿ-ಎಸ್‌ಇಝಡ್ ಹಾಗೂ ನಾನ್-ಝಡ್ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆನಾರ ಕೈಗಾರಿಕಾ ಪ್ರದೇಶಕ್ಕೆ ನೇತ್ರಾವತಿ ನದಿಯಿಂದ 1.00 ಎಂಜಿಡಿ ಸಾಮರ್ಥ್ಯದ ನೀರು ಸರಬರಾಜು ಅನುಷ್ಠಾನಗೊಳಿಸಿರುತ್ತದೆ. ಇದರಲ್ಲಿ 0.50 ಎಂಜಿಡಿ ನೀರನ್ನು ಐಟಿ-ಝಡ್ ಹಾಗೂ ನಾನ್-ಝಡ್ ಕೈಗಾರಿಕೆಗಳಿಗೆ ಒದಗಿಸುತ್ತಿದ್ದು, ಉಳಿದ 0.50 ಎಂಜಿಡಿ ನೀರನ್ನು ಕೆನರಾ ಕೈಗಾರಿಕಾ ಪ್ರದೇಶಕ್ಕೆ ಒದಗಿಸುವುದಕ್ಕಾಗಿ ಮಿತ್ತಕೋಡಿ ಬೂಸ್ಟರ್ ಸ್ಟೇಷನ್‌ನಿಂದ 3.50 ಕಿ.ಮೀ ಉದ್ದದ ಪೈಪಲೈನ್ ಅಳವಡಿಸುವ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News