ಆರೆಸ್ಸೆಸ್ ನಾಯಕರ ಹತ್ಯೆ ಸಂಚಿನ ಹಿಂದೆ ರಾಜಕೀಯ ಪಿತೂರಿ: ಪಿಎಫ್ಐ

Update: 2019-01-22 16:25 GMT

ಶಿವಮೊಗ್ಗ, ಜ.22: ಆರೆಸ್ಸೆಸ್ ನಾಯಕರ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಇತ್ತೀಚೆಗೆ ಕಾಸರಗೋಡಿನ ಮುಸ್ಲಿಂ ಯುವಕನೊರ್ವನನ್ನು ದಿಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದು, ಬಂಧಿತನು ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ಪ್ರಕರಣವು ಒಂದು ದೊಡ್ಡ ಮಟ್ಟದ ರಾಜಕೀಯ ಪಿತೂರಿಯ ಭಾಗವಾಗಿರುವಂತೆ ತೋರುತ್ತಿದ್ದು ಪೊಲೀಸರು ಇದರ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯುವುದರ ಮೂಲಕ ಸತ್ಯವನ್ನು ಹೊರ ತರಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಆಗ್ರಹಿಸಿದೆ.

ಈ ಕುರಿತಂತೆ ಇತ್ತೀಚೆಗೆ ಸಂಘಟನೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಆರೆಸ್ಸೆಸ್ ನಾಯಕರ ಹತ್ಯೆಯ ಸಂಚು ನಡೆಯುತ್ತಿದೆಯೆಂದು ರಾಜ್ಯದ ಮಾಧ್ಯಮಗಳು ವರದಿಗಳನ್ನು ಬಿತ್ತರಿಸಿದ ಬೆನ್ನಿಗೆ ಇಂತಹ ಬಂಧನವೊಂದು ನಡೆದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಜನರ ಮುಂದೆ ಸೋತು ನಿಂತಿರುವ ಸಂದರ್ಭದಲ್ಲಿ ತನ್ನ ಉಳಿವಿಗಾಗಿ ಹಿಂದುತ್ವದ ಬೆನ್ನು ಹತ್ತಿದೆ. ಬಿಜೆಪಿಯ ಮಾತೃ ಸಂಘಟನೆಯಾದ ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳು ಅಯೋಧ್ಯೆ, ರಾಮ ಮಂದಿರ ಮುಂತಾದ ವಿಷಯಗಳನ್ನು ಮುನ್ನೆಲೆಗೆ ತರುವ ಮೂಲಕ ಜನರ ಮನಸ್ಸಿನಲ್ಲಿ ಮತೀಯ ದ್ವೇಷ ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಾ ಬಿಜೆಪಿಯ ತಪ್ಪುಗಳನ್ನು ಮರೆಸಲು ಪ್ರಯತ್ನಿಸುತ್ತಿವೆ ಎಂದು ಸಂಘಟನೆ ದೂರಿದೆ.

ಈ ಸಂದರ್ಭದಲ್ಲಿ ಆರೆಸ್ಸೆಸ್ ನಾಯಕರ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಬಿಜೆಪಿಯ ಮುಸ್ಲಿಂ ನಾಯಕನೊಬ್ಬನನ್ನು ಬಂಧಿಸಿರುವುದು ಅನುಮಾನವನ್ನುಂಟುಮಾಡಿದೆ. ಆರೆಸ್ಸೆಸ್ ನ ಗುಪ್ತ ವಿಭಾಗವೊಂದು ತನ್ನ ನಾಯಕರನ್ನು ಹತ್ಯೆಗೆಯ್ಯುವ ಜವಾಬ್ದಾರಿಯನ್ನು ತನ್ನ ಒಡನಾಟದ ಮುಸ್ಲಿಂ ಯುವಕನಿಗೆ ಹೊರುವ ಮೂಲಕ ಸಂಪೂರ್ಣವಾಗಿ ಮುಸ್ಲಿಂ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ರಾಜ್ಯದಲ್ಲಿ ಬಿಜೆಪಿಗೆ ರಾಜಕೀಯ ಲಾಭವನ್ನು ತರುವ ಪ್ರಯತ್ನ ಇದಾಗಿರಬಹುದೆಂದು ಸಂಘಟನೆ ಸಂಶಯ ವ್ಯಕ್ತಪಡಿಸಿದೆ.

ಈ ಪ್ರಕರಣದಲ್ಲಿ ರಾಜಕೀಯ ಲಾಭಕ್ಕಾಗಿ ಆರೆಸ್ಸೆಸ್ ನಾಯಕರನ್ನು ಹತ್ಯೆಗೈದು ಮುಸಲ್ಮಾನರ ತಲೆಗೆ ಕಟ್ಟುವ ಪ್ರಯತ್ನ ನಡೆಸುತ್ತಿದೆಯೇ ಎಂಬ ಅನುಮಾನ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಆಯಾಮದಲ್ಲೂ ತನಿಖೆಯನ್ನು ನಡೆಸಬೇಕು ಮತ್ತು ಸತ್ಯವನ್ನು ಹೊರತರಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರರವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News