ಶಿವಮೊಗ್ಗ: ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಶ; ಆರೋಪಿಗಳು ಪರಾರಿ

Update: 2019-01-22 16:31 GMT

ಶಿವಮೊಗ್ಗ, ಜ. 22: ಯಾವುದೇ ಪರವಾನಿಗೆಯಿಲ್ಲದೆ ಕಾನೂನುಬಾಹಿರವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಟ್ರ್ಯಾಕ್ಟರೊಂದನ್ನು ಶಿವಮೊಗ್ಗ ತಹಶೀಲ್ದಾರ್ ಪತ್ತೆ ಹಚ್ಚಿ ವಶಕ್ಕೆ ಪಡೆದಿರುವ ಘಟನೆ ತಡರಾತ್ರಿ ನಡೆದಿದೆ.

ನಗರದ ಹೊರವಲಯ ಪಿಳ್ಳಂಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಕೆಲವರು ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರನ್ನು ಬೆದರಿಸಿ ಟ್ರ್ಯಾಕ್ಟರ್ ಕೊಂಡೊಯ್ಯುವ ಯತ್ನ ಕೂಡ ನಡೆಸಿದ್ದಾರೆ. ಆದರೆ ಯಾವುದೇ ಬೆದರಿಕೆಗೆ ತಹಶೀಲ್ದಾರ್ ಮತ್ತವರ ಸಿಬ್ಬಂದಿಗಳು ಬಗ್ಗಿಲ್ಲ. ತದನಂತರ ಚಾಲಕ ಹಾಗೂ ಇತರರು ಸ್ಥಳದಲ್ಲಿಯೇ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ತಹಶೀಲ್ದಾರ್ ಜೊತೆಯಲ್ಲಿ ರೆವಿನ್ಯೂ ಇನ್ಸ್ ಪೆಕ್ಟರ್ ಸುರೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಮೋಹನ್‍ ಕುಮಾರ್ ಹಾಗೂ ಸಂತೋಷ್ ಮೊದಲಾದವರಿದ್ದರು. ಪರಿಶೀಲನೆ ವೇಳೆ ಟ್ರ್ಯಾಕ್ಟರ್ ಗೆ ನೊಂದಣಿ ಸಂಖ್ಯೆ ಹಾಕದೆ ಮರಳು ಸಾಗಾಣೆ ಮಾಡುತ್ತಿದ್ದುದು ಕಂಡುಬಂದಿದ್ದು, ತನಿಖೆ ಮುಂದುವರಿದಿದೆ.

ಕಾರ್ಯಾಚರಣೆ: ಬಿ.ಎನ್.ಗಿರೀಶ್‍ರವರು ಕಳೆದ ಕೆಲ ದಿನಗಳ ಹಿಂದಷ್ಟೆ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಪಿಳ್ಳಂಗೆರೆ ಸುತ್ತಮುತ್ತ ಸರ್ಕಾರದ ಅನುಮತಿಯಿಲ್ಲದೆ ಕಾನೂನುಬಾಹಿರವಾಗಿ ಮರಳು ಸಾಗಾಣೆ ಮಾಡುತ್ತಿರುವ ಕುರಿತಂತೆ ಸಾರ್ವಜನಿಕ ವಲಯದಿಂದ ದೂರುಗಳು ಅವರಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ತಡರಾತ್ರಿ ತಮ್ಮ ಸಿಬ್ಬಂದಿಗಳೊಂದಿಗೆ ಪಿಳ್ಳಂಗೆರೆ ಗ್ರಾಮದ ಸುತ್ತಮುತ್ತಲು ತಪಾಸಣೆ ನಡೆಸುತ್ತಿದ್ದ ವೇಳೆ, ಕಾನೂನುಬಾಹಿರವಾಗಿ ಟ್ರ್ಯಾಕ್ಟರ್ ನಲ್ಲಿ ಮರಳು ಸಾಗಾಣೆ ಮಾಡುತ್ತಿದ್ದುದು ಪತ್ತೆಯಾಗಿದೆ ಎಂದು ತಹಶೀಲ್ದಾರ್ ಕಚೇರಿಯ ಮೂಲಗಳು ಮಾಹಿತಿ ನೀಡಿವೆ.

ಕಠಿಣ ಕ್ರಮ: ಬಿ.ಎನ್.ಗಿರೀಶ್

ಪಿಳ್ಳಂಗೆರೆ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದಿರುವುದು ನಿಜ. ಕಾನೂನುಬಾಹಿರವಾಗಿ ಮರಳು ಸಾಗಾಣೆ ಮಾಡುವವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು. ಹಾಗೆಯೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಿ.ಎನ್.ಗಿರೀಶ್‍ರವರು ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News