ಶಿವಮೊಗ್ಗ: ಬಾಲಕನ ಹತ್ಯೆ ಆರೋಪಿಗೆ ಜೀವಾವಧಿ ಶಿಕ್ಷೆ

Update: 2019-01-22 16:38 GMT

ಶಿವಮೊಗ್ಗ, ಜ. 21: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ 7 ವರ್ಷ ಬಾಲಕನನ್ನು ಅಮಾನುಷವಾಗಿ ಕೊಂದ ತಿಮ್ಮನಗೌಡ ಅಲಿಯಾಸ್ ತಿಮ್ಮೇಶಿ ಎಂಬಾತನಿಗೆ ಐಪಿಸಿ ಕಲಂ 364, 302, 201 ರ ಅಡಿ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 1,35,000 ರೂ. ದಂಡ ವಿಧಿಸಿ ಶಿವಮೊಗ್ಗದ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎ ಹರೀಶ್‍ರವರು ತೀರ್ಪು ನೀಡಿದ್ದಾರೆ.

ಘಟನೆ ಹಿನ್ನೆಲೆ: ಶಿಕಾರಿಪುರ ತಾ. ಕಲ್ಮನೆ ಗ್ರಾಮದ ತೇರುಬೀದಿ ವಾಸಿ ರೇಖಾ (ಆರೋಪಿ-2) ತನ್ನ ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಪ್ರಮೋದ್ ಎಂಬ 7 ವರ್ಷದ ಮಗನೊಡನೆ ತವರು ಮನೆಯಲ್ಲಿ ವಾಸವಿದ್ದರು. ಆ ಬಳಿಕ ಔಷಧ ಮಾರಾಟ ಮಾಡಲು ಬರುತ್ತಿದ್ದ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಜೀನಹಳ್ಳಿ ಗ್ರಾಮದ ತಿಮ್ಮನಗೌಡ ಅಲಿಯಾಸ್ ತಿಮ್ಮೇಶಿಯ ಪರಿಚಯವಾಗಿತ್ತು. ಅವರಿಬ್ಬರ ನಡುವೆ ಅನೈತಿಕ ಸಂಬಂಧವೇರ್ಪಟ್ಟಿತ್ತು. 

ಇದಕ್ಕೆ ಮನೆಯವರು ವಿರೋಧಿಸುತ್ತಿದ್ದು, ಇವರಿಬ್ಬರು ಮನೆಬಿಟ್ಟು ಓಡಿಹೋಗಲು ತೀರ್ಮಾನಿಸಿದ್ದರು. ಇದಕ್ಕೆ ತನ್ನ ಮಗ ಪ್ರಮೋದ ಅಡ್ಡಿಯಾಗಿದ್ದಾನೆಂದು ತಿಳಿದು ಮಗನನ್ನು ಕೊಲ್ಲುವಂತೆ ರೇಖಾಳು ತಿಮ್ಮೇಶಿಗೆ ಹೇಳಿದ್ದಳು. ಅದರಂತೆ ಆತನು 2017 ರ ಜೂನ್‍ನಲ್ಲಿ ಬಾಲಕನನ್ನು ಪುಸಲಾಯಿಸಿ ಬೈಕ್‍ನಲ್ಲಿ ಕರೆದುಕೊಂಡು ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ಹತ್ತಿರವಿರುವ ಕುಮದ್ವತಿ ಸೇತುವೆ ಬಳಿ ನದಿ ದಂಡೆ ಬಳಿ ಕಲ್ಲಿನಿಂದ ಬಾಲಕನ ತಲೆಯನ್ನು ಜಜ್ಜಿ ಸಾಯಿಸಿದ್ದ ಎನ್ನಲಾಗಿದೆ.

ಈ ಬಗ್ಗೆ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಿಮ್ಮೇಶಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜೆ.ಶಾಂತರಾಜ್‍ರವರು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News