ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ.28ರಂದು 'ದೆಹಲಿ ಚಲೋ': ಎಐಯುಟಿಯುಸಿ ಮುಖಂಡ ಶಶಿಧರ್

Update: 2019-01-22 17:48 GMT

ಮೈಸೂರು,ಜ.22: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ, ಅಂಗನವಾಡಿ, ಬಿಸಿಯೂಟ ಯೋಜನೆಗಳ ಕಾರ್ಯಕರ್ತರಿಂದ ಜ.28ರಂದು 'ದೆಹಲಿ ಚಲೋ' ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ನ ರಾಜ್ಯ ಕಾರ್ಯಕಾರಿ ಸದಸ್ಯ ಶಶಿಧರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ದೇಶಾದ್ಯಂತ ಸುಮಾರು 46 ಲಕ್ಷ ಮಹಿಳಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಆದರೆ ಈ ವರ್ಗಕ್ಕೆ ನಿಗದಿತ ವೇತನ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು  ತಿಳಿಸಿದರು.

ಕಾರ್ಮಿಕ ಕಾಯ್ದೆ ಪ್ರಕಾರ ದುಡಿಯುವ ವರ್ಗಕ್ಕೆ 21 ಸಾವಿರ ಕನಿಷ್ಟ ವೇತನ ನೀಡಬೇಕು. ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಈಗಾಗಲೇ ವರದಿ ನೀಡಿದ್ದರೂ ಸರ್ಕಾರ ಜಾರಿಗೊಳಿಸುತ್ತಿಲ್ಲ. ಪ್ರೋತ್ಸಾಹ ಧನವನ್ನು ದ್ವಿಗುಣಗೊಳಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಗೌರವ ಧನವನ್ನು ಹಲವು ರಾಜ್ಯಗಳಲ್ಲಿ ನಿಗದಿತ ವೇಳೆಗೆ ನೀಡದೆ ಜೀವನ ನಡೆಸಲು ತೊಂದರೆಯಾಗಿದೆ ಎಂದು ಆರೋಪಿಸಿದರು.

ಚಾಮರಾಜನಗರ, ಮಂಡ್ಯ, ಮಡಿಕೇರಿ, ಹಾಸನ ಸೇರಿದಂತೆ ಮೈಸೂರು ಭಾಗದಿಂದ 500ಕ್ಕೂ ಹೆಚ್ಚು ಕಾರ್ಯಕರ್ತೆಯರು ಜ.25ರಂದು ನಗರದ ಸ್ವರ್ಣಜಯಂತಿ ರೈಲಿನಿಂದ ದೆಹಲಿಗೆ ಪಯಣ ಬೆಳೆಸಲಿದ್ದು, ಜ.28ರಂದು ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ದೇಶಾದ್ಯಂತ ಒಂದೂವರೆ-ಎರಡು ಲಕ್ಷ ಕಾರ್ಯಕರ್ತೆಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಬೇಡಿಕೆಗಳು: ಯೋಜನೆಯಡಿ ದುಡಿಯುವ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು, ಕಾರ್ಮಿಕರೆಂದು ಪರಿಗಣಿಸಬೇಕು, ಕನಿಷ್ಠ 21 ಸಾವಿರ ಮಾಸಿಕ ವೇತನ ನಿಗದಿಗೊಳಿಸಬೇಕು. ನಿವೃತ್ತಿ ಬಳಿಕ 6 ಸಾವಿರ ರೂ.ಗಳ ಪಿಂಚಣಿ, ಪಿಎಫ್, ಇಎಸ್ಐ, ಗ್ರಾಚ್ಯುಟಿ, ತುಟ್ಟಿ ಭತ್ಯೆ ಇನ್ನಿತರೆ ಸೌಲಭ್ಯ ನೀಡಬೇಕು. ಖಾಸಗೀಕರಣ ನಿಲ್ಲಿಸಬೇಕು ಹಾಗೂ ಬಜೆಟ್ ನಲ್ಲಿ  ಹಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಯುಟಿಯುಸಿ ಜಿಲ್ಲಾ ಸಂಚಾಲಕ ಚಂದ್ರಶೇಖರ್, ಮಹಿಳಾ ಹೋರಾಟಗಾರ್ತಿ ಸಂದ್ಯಾ, ಆಶಾ, ಬಿಸಿಯೂಟ ಕಾರ್ಯಕರ್ತೆಯರಾದ ಗೀತಾ, ಜಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News