ಮೈಸೂರಿನಲ್ಲಿ ಕಾಯಕಯೋಗಿ ಸಿದ್ಧಗಂಗಾ ಶ್ರೀಗೆ ಭಕ್ತಿಪೂರ್ವ ಶ್ರದ್ಧಾಂಜಲಿ

Update: 2019-01-22 17:53 GMT

ಮೈಸೂರು,ಜ.22: ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿಂದು ಪ್ರಗತಿಪರರು, ಚಿಂತಕರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಂತಾಪ ಸೂಚಿಸಿ, ಶ್ರದ್ದಾಂಜಲಿ ಅರ್ಪಿಸಿದರು.

ನಗರದ ಗನ್ ಹೌಸ್ ಬಳಿಯ ಬಸವೇಶ್ವರ ಪ್ರತಿಮೆ ಎದುರು ಸಿದ್ಧಗಂಗಾ ಶ್ರೀಗಳ ಭಾವಚಿತ್ರವನ್ನಿಟ್ಟು ಅದಕ್ಕೆ ಪುಷ್ಪಾರ್ಚನೆಗೈದರು. ಸಿದ್ದಗಂಗಾ ಶ್ರೀಗಳಿಗೆ ಸಂತಾಪ ಸಲ್ಲಿಸಿ ಸಾಹಿತಿ ಪ್ರೊ. ಭಗವಾನ್ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಪಾಲಿಸಿದ ಮಹಾನ್ ವ್ಯಕ್ತಿ ಸಿದ್ದಗಂಗಾ ಶ್ರೀಗಳು. ಶ್ರೀಗಳ 88 ವರ್ಷಗಳ ಪರಿಶ್ರಮದಿಂದ ಸಿದ್ಧಗಂಗಾ ಮಠ ಪ್ರಪಂಚದಲ್ಲಿಯೇ ಪ್ರಸಿದ್ಧಿಯಾಗಿದೆ. ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿರುವುದು ಯುಗಾಂತ್ಯವಾದಂತಾಗಿದೆ. ಆದರೆ ಅವರು ಜೀವಿಸಿದ್ದ ಈ ಶತಮಾನ ಮುಂದಿನ ಶತಮಾನಕ್ಕೆ ನಾಂದಿಯಾಗಿದೆ ಎಂದರು.

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ಮೈಸೂರಿನ ರಾಮಕೃಷ್ಣನಗರ ನಿವಾಸಿಗಳು ಶ್ರದ್ಧಾಂಜಲಿ ಸಮರ್ಪಿಸಿದರು.

ರಾಮಕೃಷ್ಣ ನಗರದ ಬಸವ ಸೇವಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಂದೋಲನ ವೃತ್ತದ ರಾಮಕೃಷ್ಣ ಪರಮಹಂಸರ ಪ್ರತಿಮೆ ಮುಂಭಾಗ ಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿದರು. ಶ್ರದ್ದಾಂಜಲಿ ಸಭೆಯಲ್ಲಿ ಪರಿಷತ್ ಮಾಜಿ ಸಚಿವ ಮಾದೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ರಾಜ್ಯ ಕಬ್ಬುಬೆಳೆಗಾರರ ಸಂಘದಿಂದ ಶತಾಯುಷಿಗೆ ಹಸಿರು ನಮನ ಸಲ್ಲಿಸಲಾಯಿತು. ನಗರದ ಕುವೆಂಪು ಉದ್ಯಾನವನದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ರೈತ ಮುಖಂಡರು ಶ್ರದ್ಧಾಂಜಲಿ ಸಮರ್ಪಿಸಿದರು.

ಈ ಸಂದರ್ಭ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರದಿಂದ ನೀಡುವ ಬಿಸಿಯೂಟ ಯೋಜನೆಗೆ ಸಿದ್ಧಗಂಗಾ ಶ್ರೀಗಳ ಹೆಸರಿಡುವಂತೆ ಆಗ್ರಹಿಸಿದರು. ಇದೇ ವೇಳೆ  ಶ್ರೀಗಳಿಗೆ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಮತ್ತೊಂದೆಡೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಸಿಬ್ಬಂದಿಗಳು ಶ್ರದ್ದಾಂಜಲಿ ಅರ್ಪಿಸಿದರು. ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಮುಂಭಾಗ ಶ್ರೀಗಳ ಭಾವಚಿತ್ರವಿರಿಸಿ ಪುಷ್ಪಾರ್ಚನೆಗೈಯ್ಯುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. 

ಈ ಸಂದರ್ಭದಲ್ಲಿ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಚಂದ್ರಶೇಖರ್, ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ಎಎಸ್‍ಐ ಗೌರಿಸ್ವಾಮಿ, ನಂಜಂಡಸ್ವಾಮಿ, ರಮೇಶ್, ಕಿರಗಸೂರು ಶಂಕರ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News