ಎಐಸಿಸಿಗೆ ಪ್ರಿಯಾಂಕ ಗಾಂಧಿ ನೇಮಕದಿಂದ ಬಿಜೆಪಿಗೆ ನಡುಕ: ದಿನೇಶ್ ಗುಂಡೂರಾವ್

Update: 2019-01-23 13:01 GMT

ಬೆಂಗಳೂರು, ಜ. 23: ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಪ್ರಿಯಾಂಕ ಗಾಂಧಿಯವರನ್ನು ನೇಮಕ ಮಾಡಿರುವುದು ಬಿಜೆಪಿಗೆ ನಡುಕ ಸೃಷ್ಟಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿಯವರನ್ನು ಉತ್ತರ ಪ್ರದೇಶದ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೆಲಸ ಮಾಡುವವರಿಗೆ ಅವಕಾಶ ಕಲ್ಪಿಸಿದ್ದು, ಇದು ಪಕ್ಷದ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ ಎಂದರು.

ಐದಾರು ವರ್ಷಗಳಿಂದ ತಟಸ್ಥರಾಗಿದ್ದ ಪ್ರಿಯಾಂಕ ಗಾಂಧಿಯವರು ಸಕ್ರಿಯ ರಾಜಕೀಯಕ್ಕೆ ಬರಬೇಕೆಂದು ಪಕ್ಷದ ಕಾರ್ಯಕರ್ತರಲ್ಲಿ ಬಹಳಷ್ಟು ನಿರೀಕ್ಷೆ ಇತ್ತು. ಈ ನೇಮಕದಿಂದ ಪಕ್ಷದ ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ತಂದಿದೆ ಎಂದ ಅವರು, ಪ್ರಿಯಾಂಕ ಗಾಂಧಿ ನೇಮಕವನ್ನು ಪಕ್ಷ ಒಕ್ಕೊರಲಿನಿಂದ ಸ್ವಾಗತಿಸುತ್ತದೆ ಎಂದರು.

ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ: ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಯಾರೊಬ್ಬರನ್ನು ರಕ್ಷಿಸುವ ಅಥವಾ ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ದಿನೇಶ್ ಗುಂಡೂರಾವ್, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚನೆ ಮಾಡಲಾಗಿದ್ದು, ಶಾಸಕ ಗಣೇಶ್ ಅವರನ್ನು ಅಮಾನತು ಮಾಡಲಾಗಿದೆ. ಈಗಾಗಲೇ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಗೃಹ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.

ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ರೆಸಾರ್ಟ್‌ನಲ್ಲಿ ಶಾಸಕರನ್ನು ಹಿಡಿಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು. ಮೈತ್ರಿ ಸರಕಾರ ಬೀಳಿಸುವುದು ಬಿಜೆಪಿ ಉದ್ದೇಶವಾಗಿತ್ತು. ಇದೀಗ ಅವರು ನಗ್ನರಾಗಿದ್ದಾರೆ ಎಂದ ಅವರು, ಸಿಎಲ್‌ಪಿಗೆ ಗೈರು ಹಾಜರಾದ ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಲಾಗಿದೆ ಎಂದರು.

ಆಪರೇಷನ್ ಕಮಲದ ಬಗ್ಗೆ ಬಿಜೆಪಿ ಶಾಸಕರಲ್ಲೇ ಅಸಮಾಧಾನವಿದೆ. ಹೀಗಾಗಿ ನಾವು ಬಿಜೆಪಿ ಶಾಸಕರನ್ನು ಸೆಳೆಯುವ ಕೆಲಸ ಮಾಡಲಿಲ್ಲ. 20 ಮಂದಿ ಶಾಸಕರನ್ನು ರಾಜೀನಾಮೆ ಕೊಡಿಸಲು ಮುಂದಾಗಿದ್ದರು. ರಾಜ್ಯಕ್ಕೆ ನೀಚ ಪದ್ಧತಿ ತಂದದ್ದೆ ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News