ಜ.24ರ ಬೆಳಗ್ಗೆ 6 ಗಂಟೆಯಿಂದ ಕೇಬಲ್ ಟಿವಿ ಬಂದ್
ಬೆಂಗಳೂರು, ಜ.23: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಜಾರಿಗೊಳಿಸುತ್ತಿರುವ ಹೊಸ ಕೇಬಲ್ ನೀತಿ ವಿರೋಧಿಸಿ ಜ.24ರ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಕೇಬಲ್ ಬಂದ್‌ಗೆ ಕೇಬಲ್ ಟಿವಿ ಆಪರೇಟರ್ ಸಂಘಟನೆಗಳು ನಿರ್ಧರಿಸಿವೆ.
ಗ್ರಾಹಕರು ಮತ್ತು ಕೇಬಲ್ ಆಪರೇಟರ್‌ಗಳ ಹಿತದೃಷ್ಟಿಯಿಂದ ದಕ್ಷಿಣ ಭಾರತದಾದ್ಯಂತ ಕೇಬಲ್ ಟಿವಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹಾಗಾಗಿ ಕರ್ನಾಟಕದಲ್ಲೂ ಅಂದು ಕೇಬಲ್ ಟಿವಿಗಳು ಬಂದ್ ಆಗಲಿವೆ ಎಂದು ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಪ್ಯಾಟ್ರಿಕ್ ರಾಜು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ನಾಳೆ ಕೇಬಲ್ ಟಿವಿ ಆಪರೇಟಿಂಗ್ ಸಿಸ್ಟಂ ಸ್ಥಗಿತಗೊಳಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರಿಗೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗಿದೆ. ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಟಿವಿ ಚಾನಲ್ ಬಂದ್ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಕೂಡಲೇ ಈ ನೀತಿಯನ್ನು ಹಿಂಪಡೆಯಬೇಕು. ಇಲ್ಲವಾದರೆ ಟಿವಿ ಆಪರೇಟರ್‌ಗಳು ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಸದ್ಯ ಗ್ರಾಹಕರು ಕಡಿಮೆ ಹಣ ನೀಡಿ ಹೆಚ್ಚು ಚಾನೆಲ್‌ಗಳನ್ನು ವೀಕ್ಷಿಸುತ್ತಿದ್ದಾರೆ. ಆದರೆ ಹೊಸ ದರ ಪರಿಷ್ಕರಣೆಯಾದರೆ, ಹೆಚ್ಚು ಹಣ ಕೊಟ್ಟು ಕಡಿಮೆ ಚಾನೆಲ್‌ಗಳನ್ನು ನೋಡುವಂತಹ ಸಂದರ್ಭ ಬರಲಿದೆ. ಟಿವಿ ವೀಕ್ಷಣೆಯಲ್ಲಿಯೂ ಗ್ರಾಹಕರನ್ನು ತಾರತಮ್ಯ ಮಾಡಿದಂತಾಗುತ್ತದೆ. ಹೀಗಾಗಿ ಕೇಂದ್ರ ಸರಕಾರ ಕೂಡಲೆ ಹೊಸ ದರ ಪರಿಷ್ಕರಣೆಯನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದರು.