ರಾಜ್ಯದ ಘನತೆ ಹೆಚ್ಚಿಸುವಂತೆ ಕುಂಭಮೇಳ ಆಯೋಜನೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-01-23 14:15 GMT

ಬೆಂಗಳೂರು, ಜ. 23: ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 17ರಿಂದ ನಡೆಯುವ ಕುಂಭಮೇಳ ಕಾರ್ಯಕ್ರಮ ಕರ್ನಾಟಕದ ಘನತೆ ಹೆಚ್ಚಿಸುವಂತೆ ನಡೆಯಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ಬುಧವಾರ ಕುಂಭಮೇಳ ಕುರಿತು ವಿಜಯನಗರದಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಾವೇರಿ, ಕಪಿಲಾ, ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳ ಅತ್ಯಂತ ದೊಡ್ಡಮಟ್ಟದಲ್ಲಿ ನಡೆಯಬೇಕು. ನಮ್ಮ ಧಾರ್ಮಿಕ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಪ್ರತೀಕವಾಗಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.

ಮಳೆಗಾಲಕ್ಕೂ ಮುನ್ನ ದೇವರ ಆಶೀರ್ವಾದ ಬೇಕು. ಈ ವರ್ಷ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬರ ಪರಿಸ್ಥಿತಿ ಇದೆ. ಮುಂದಿನ ವರ್ಷ ಉತ್ತಮ ಮಳೆಯಾಗಿ ಜನ ನಮ್ಮೆದಿಯಿಂದ ಬದುಕಬೇಕು ಎಂದ ಅವರು, ಕುಂಭಮೇಳ ಆಯೋಜನೆಗೆ ಹಣದ ಕೊರತೆ ಇಲ್ಲ. ಸೋಪಾನಕಟ್ಟಿ, ರಸ್ತೆ ದುರಸ್ತಿ, ಶೌಚಾಲಯ, ಸ್ನಾನದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಆಗಬೇಕು ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ, ಬೆಂಗಳೂರಿನ ಕೈಲಾಸ ಆಶ್ರಮದ ವಿಜಯೇಂದ್ರಪುರಿ ಸ್ವಾಮಿ ಆಶಯದಂತೆ ಅವರ ಸಲಹೆ ಪಡೆದು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು.

ಈ ಕುಂಭಮೇಳಕ್ಕೆ ಹಲವಾರು ರಾಜ್ಯಗಳಿಂದ ಯತಿವರ್ಯರು ಆಗಮಿಸಲಿದ್ದಾರೆ. ಅವರಿಗೆ ಎಲ್ಲ ರೀತಿಯ ಸೌಕರ್ಯ ಮಾಡಿಕೊಡಬೇಕು. ಅವರು ಕರ್ನಾಟಕದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳಕ್ಕೆ ಶಾಶ್ವತವಾದ ಮೂಲ ಸೌಕರ್ಯಗಳ ಒದಗಿಸಲು ಗಮನಹರಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕೆಲಸ ಮಾಡಲು ನೀಲನಕ್ಷೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಉತ್ತರಭಾರತದಲ್ಲಿ ಇತ್ತೀಚಿಗೆ ನಡೆದ ಕುಂಭಮೇಳಕ್ಕೆ ಸುಮಾರು ಸಾವಿರಾರು ಕೋಟಿ ರೂ.ಖರ್ಚಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಅಲ್ಲಿ ಯಾವ ರೀತಿ ಆಯೋಜನೆ ಆಗಿದೆ ಎಂದು ಇಬ್ಬರು ಅಧಿಕಾರಿಗಳು ಹೋಗಿ ಅಧ್ಯಯನ ಮಾಡುವಂತೆ ಇದೇ ವೇಳೆ ಕುಮಾರಸ್ವಾಮಿ ಸೂಚಿಸಿದರು. ಈ ಕುಂಭಮೇಳದ ವೇಳೆ ಸಾರ್ವಜನಿಕ ಕೆಲಸಗಳಿಗೆ ಅನಾನುಕೂಲ ಆಗಬಾರದು, ಸರಕಾರದ ಕೆಲಸಗಳು ಆಗಬೇಕು ಎಂದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಸಿಎಂ ಸೂಚನೆಯಂತೆ ಎಲ್ಲ ವ್ಯವಸ್ಥೆಗಳು ಅಟ್ಟುಕಟ್ಟಾಗಿ ನಡೆಯಬೇಕು. ಕೇವಲ 23 ದಿನಗಳು ಮಾತ್ರ ಉಳಿದಿದೆ. ಸಮಾರೋಪಾದಿಯಲ್ಲಿ ಕೆಲಸಗಳು ಆಗಬೇಕು ಎಂದು ಇದೇ ವೇಳೆ ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಆದಿಚುಂಚನಗಿರಿಯ ನಿರ್ಮಲಾ ನಂದನಾಥ ಸ್ವಾಮಿ, ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಶಾಸಕರಾದ ಡಾ. ಯತೀಂದ್ರ, ಅಶ್ವಿನ್ ಕುಮಾರ್, ಎಚ್. ವಿಶ್ವನಾಥ್, ಸುರೇಶ್‌ಗೌಡ, ನಾರಾಯಣ ಗೌಡ, ಶ್ರೀನಿವಾಸ್, ಅನ್ನದಾನಿ, ರವೀಂದ್ರ ಶ್ರೀಕಂಠೇಗೌಡ, ಸಂಸದ ಎಲ್.ಆರ್. ಶಿವರಾಮೇಗೌಡ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News