ಇಂದಿರಾ ಗಾಂಧಿಯನ್ನೇ ಬಂಧಿಸಲಾಗಿತ್ತು, ಇನ್ನು ಶಾಸಕ ಗಣೇಶ್ ಯಾವ ಲೆಕ್ಕ: ಎಚ್.ವಿಶ್ವನಾಥ್
ಬೆಂಗಳೂರು, ಜ. 23: ‘ಇಂದಿರಾ ಗಾಂಧಿಯವರನ್ನೇ ಬಂಧಿಸಲಾಗಿತ್ತು, ಇನ್ನು ಶಾಸಕ ಕಂಪ್ಲಿ ಗಣೇಶ್ ಯಾವ ಲೆಕ್ಕ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಾಸಕರ ಹೊಡೆದಾಟ ಪ್ರಕರಣದಿಂದ ಜೆಡಿಎಸ್ ಪಕ್ಷಕ್ಕೂ ತೀವ್ರ ಮುಜುಗರ ಆಗಿದೆ. ಶಾಸಕ ಗಣೇಶ್ ಪತ್ತೆ ಮೂರು ತಂಡಗಳನ್ನು ರಚಿಸಿದ್ದು, ಶೀಘ್ರದಲ್ಲೆ ಅವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವರೇ ಹೇಳಿದ್ದಾರೆ ಎಂದರು.
ಪ್ರಧಾನಿ ಬರಬೇಕಿತ್ತು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿಯವರು ಆಗಮಿಸಬೇಕಿತ್ತು. ಆದರೆ, ಕೆಲಸದ ಒತ್ತಡದಿಂದ ಬರಲಿಕ್ಕೆ ಆಗಿಲ್ಲ. ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಘೋಷಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.
ಪರಿಪೂರ್ಣವಲ್ಲ: ಮೈತ್ರಿ ಸರಕಾರದ ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರೂ ಇರಬೇಕು. ಇಲ್ಲವಾದರೆ ಸಮಿತಿ ಪರಿಪೂರ್ಣವಲ್ಲ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಸಮನ್ವಯ ಸಮಿತಿ ಮುಖ್ಯ ಉದ್ದೇಶ. ಈ ಬಗ್ಗೆ ಸಿದ್ದರಾಮಯ್ಯನವರನ್ನೇ ಕೇಳಬೇಕು ಎಂದು ವಿಶ್ವನಾಥ್ ನುಡಿದರು.