×
Ad

ಮೂರು ತಿಂಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯ: ಹೈಕೋರ್ಟ್‌ಗೆ ಹೇಳಿಕೆ ನೀಡಿದ ಸರಕಾರ

Update: 2019-01-23 21:08 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.23: ಕ್ಯಾಬ್‌ಗಳಲ್ಲಿನ ಚೈಲ್ಡ್‌ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಮೊದಲು 2.5 ಲಕ್ಷ ಕ್ಯಾಬ್‌ಗಳಲ್ಲಿ ಚೈಲ್ಡ್ ಲಾಕ್ ಅಳವಡಿಸಲಾಗಿತ್ತು. ಆದರೆ, ಸದ್ಯ 42 ಸಾವಿರ ವಾಹನಗಳಲ್ಲಿನ ಚೈಲ್ಡ್‌ಲಾಕ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಉಳಿದ ವಾಹನಗಳ ಚೈಲ್ಡ್ ಲಾಕ್‌ಗಳನ್ನು ಮೂರು ತಿಂಗಳಲ್ಲಿ ನಿಷ್ಕ್ರಿಯಗೊಳಿಸಲಾಗುವುದು ಎಂದು ರಾಜ್ಯ ಸರಕಾರದ ಪರ ವಕೀಲರು ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ(ಬಿಎಸ್‌ಒಜಿ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು, ಚೈಲ್ಡ್‌ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ಸಾರಿಗೆ ಇಲಾಖೆ ಈಗಾಗಲೇ ನಿಯಮವನ್ನು ತಿದ್ದುಪಡಿ ಮಾಡಿ, ಅಧಿಸೂಚನೆಯನ್ನು ಹೊರಡಿಸಿದೆ. ಈ ಮೊದಲು 2.5 ಲಕ್ಷ ಕ್ಯಾಬ್‌ಗಳಲ್ಲಿ ಚೈಲ್ಡ್‌ಲಾಕ್‌ಗಳನ್ನು ಅಳವಡಿಸಲಾಗಿತ್ತು. ಸದ್ಯ 42 ಸಾವಿರ ವಾಹನಗಳಲ್ಲಿ ಚೈಲ್ಡ್ ಲಾಕ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಉಳಿದ ವಾಹನಗಳ ಚೈಲ್ಡ್ ಲಾಕ್ ವ್ಯವಸ್ಥೆಯನ್ನು ಮೂರು ತಿಂಗಳಲ್ಲಿ ನಿಷ್ಕ್ರಿಯಗೊಳಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿತು.

ಚೈಲ್ಡ್‌ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ಸಾರಿಗೆ ಇಲಾಖೆ ನಿಯಮ ತಿದ್ದುಪಡಿ ಮಾಡಿದೆ. ಆದರೆ, ಅದನ್ನು ಜಾರಿಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು. ಕ್ಯಾಬ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಮೇಲೆ ಇತ್ತೀಚೆಗೆ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News