ಶಾಸಕರಿಗೇ ರಕ್ಷಣೆಯಿಲ್ಲ, ಇನ್ನು ಜನಸಾಮಾನ್ಯರಿಗೆ ಎಲ್ಲಿಂದ ಕೊಡುತ್ತೀರಿ: ಬಿ.ವೈ ರಾಘವೇಂದ್ರ
Update: 2019-01-23 21:46 IST
ಹುಬ್ಬಳ್ಳಿ,ಜ.23: ಶಾಸಕರಿಗೆ ರಕ್ಷಣೆ ನೀಡುವುದಾಗಿ ಹೇಳಿ ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಶಾಸಕರಿಗೆ ರಕ್ಷಣೆಯಿಲ್ಲ ಇನ್ನು ಜನಸಾಮಾನ್ಯರಿಗೆ ರಕ್ಷಣೆ ಎಲ್ಲಿಂದ ಕೊಡುತ್ತೀರಿ ಎಂದು ಹುಬ್ಬಳ್ಳಿಯಲ್ಲಿಂದು ಸಂಸದ ಬಿ.ವೈ ರಾಘವೇಂದ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ಆನಂದ್ ಸಿಂಗ್ ಮೇಲೆ ನಡೆದ ಹಲ್ಲೆ ಖಂಡನೀಯ. ಇದನ್ನು ಇಡೀ ರಾಜ್ಯದ ಜನತೆ ನೋಡುತ್ತಿದೆ ಎಂದರು. ಆಪರೇಷನ್ ಕಮಲದ ಪ್ರಶ್ನೆಯೇ ಇಲ್ಲ. ಹಿಂದೆಯೂ ಆಪರೇಷನ್ ಕಮಲ ಮಾಡಿಲ್ಲ. ಮುಂದೆನೂ ಮಾಡೋದಿಲ್ಲ, ತಮ್ಮಲ್ಲಿನ ಗೊಂದಲ ಮುಚ್ಚಿ ಹಾಕಲು ಬಿಜೆಪಿ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಅವರಾಗಿಯೇ ಪಕ್ಷದಿಂದ ಹೊರಬಂದರೆ ನೋಡುವುದಾಗಿ ಪಕ್ಷದ ವರಿಷ್ಠರು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಗ್ಗೆ ಕೆಲವು ಶಾಸಕರಿಗೆ ವಿಶ್ವಾಸ ಇಲ್ಲ. ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವ ಸ್ಥಿತಿ ಮೈತ್ರಿ ಸರ್ಕಾರದಲ್ಲಿದೆ ಎಂದರು.