×
Ad

ಖಾಸಗಿ ಕಂಪೆನಿಗಳಿಂದ ಹೂಡಿಕೆದಾರರಿಗೆ ವಂಚನೆ: 10 ದಿನಗಳಲ್ಲಿ ಸಮಗ್ರ ಮಾಹಿತಿ ನೀಡಲು ಹೈಕೋರ್ಟ್ ನಿರ್ದೇಶನ

Update: 2019-01-23 22:39 IST

ಬೆಂಗಳೂರು, ಜ.23: ಆ್ಯಂಬಿಡೆಂಟ್, ಐಎಂಎ ಗ್ರೂಪ್ ಆಫ್ ಕಂಪೆನೀಸ್ ಸೇರಿದಂತೆ ರಾಜ್ಯದ 12 ಖಾಸಗಿ ಹೂಡಿಕೆ ಕಂಪೆನಿಗಳು ಹೂಡಿಕೆದಾರರಿಂದ ಸಾವಿರಾರು ಕೋಟಿ ರೂ. ವಸೂಲಿ ಮಾಡಿ ವಂಚಿಸಿವೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಬುಧವಾರ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್, ಈ ಬಗ್ಗೆ 10 ದಿನಗಳಲ್ಲಿ ಸಮಗ್ರ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಿದೆ.

ಈ ಕುರಿತು ಬೆಂಗಳೂರಿನ ರಶಾದ್ ನಗರದ ನಿವಾಸಿ ಇಮ್ರಾನ್ ಪಾಷಾ ಹಾಗೂ ಶಿವಾಜಿನಗರದ ನಾಜಿಯಾ ಬಾನು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ಆದೇಶಿಸಿತು.

ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ 12 ಖಾಸಗಿ ಹೂಡಿಕೆ ಕಂಪೆನಿಗಳ ವಿರುದ್ಧ ರಾಜ್ಯದ ವಿವಿಧ ಕಡೆ ಈವರೆಗೆ ಎಷ್ಟು ಪೊಲೀಸ್ ದೂರುಗಳು ಬಂದಿವೆ? ಅದರಲ್ಲಿ ಎಷ್ಟು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ? ಎಷ್ಟು ಪ್ರಕರಣಗಳಲ್ಲಿ ತನಿಖೆ ನಡೆಸಿ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ? ಈ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತ ಎಷ್ಟು ಮತ್ತು ಎಷ್ಟು ಮಂದಿ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆ 10 ದಿನಗಳಲ್ಲಿ ಸಮಗ್ರವಾದ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವಂತೆ ಸರಕಾರದ ಪರ ವಕೀಲರಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

3 ಸಾವಿರ ಕೋಟಿ ರೂ. ವಂಚನೆ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ, ಮುಜಮ್ಮಿಲ್ ಮುಷ್ತಾಕ್ ಷಾ ವಾದ ಮಂಡಿಸಿ, ಐಎಂಎ ಗ್ರೂಪ್ ಆಫ್ ಕಂಪೆನೀಸ್, ಆ್ಯಂಬಿಡೆಂಟ್ ಸೇರಿದಂತೆ ಒಟ್ಟು 12 ಖಾಸಗಿ ಹೂಡಿಕೆ ಕಂಪೆನಿಗಳಲ್ಲಿ ರಾಜ್ಯಾದ್ಯಂತ ಸುಮಾರು 50 ಸಾವಿರ ಜನ ಹೂಡಿಕೆ ಮಾಡಿದ್ದಾರೆ. ಹೂಡಿಕೆದಾರರೆಲ್ಲ ಬಡವರು ಮತ್ತು ದುಡಿಯವ ವರ್ಗಕ್ಕೆ ಸೇರಿದವರು. ಈ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ ಮೊತ್ತ ಅಂದಾಜು 3 ಸಾವಿರ ಕೋಟಿ ರೂ. ಆಗಿದೆ. ಹೆಚ್ಚು ಲಾಭಾಂಶದ ಆಸೆ ತೋರಿಸಿ ಹಣ ಹೂಡಿಕೆ ಮಾಡಿಸಿಕೊಂಡು ಈ ಕಂಪೆನಿಗಳು ಅತ್ತ ಲಾಭಾಂಶವನ್ನೂ ಕೊಡುತ್ತಿಲ್ಲ, ಇತ್ತ ಹೂಡಿಕೆ ಮಾಡಿದ ಹಣವನ್ನೂ ವಾಪಸ್ ಮಾಡುತ್ತಿಲ್ಲ. ಅಲ್ಲದೇ ಈ ಕಂಪೆನಿಗಳು ಸರಕಾರಕ್ಕೆ ಕೋಟ್ಯಂತರ ರೂ. ತೆರಿಗೆ ವಂಚಿಸುತ್ತಿವೆ. ದೂರು ದಾಖಲಿಸಿದರೆ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ. ಅಲ್ಲದೇ ಈ ಕಂಪೆನಿಗಳಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆ. ಈ ರಾಜಕಾರಣಿಗಳು ಕಂಪೆನಿಗಳ ಪರ ಹೂಡಿಕೆದಾರರಿಗೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಸಿಬಿಐ ತನಿಖೆಗೆ ಆಗಬೇಕು: ಅಮಾಯಕರನ್ನು ವಂಚಿಸುತ್ತಿರುವ ಈ ಕಂಪೆನಿಗಳು ದೇಶದ ಬೇರೆ ಬೇರೆ ಕಡೆ ಶಾಖೆಗಳನ್ನು ಹೊಂದಿವೆ. ಇದು ಅಂತರ್‌ರಾಜ್ಯ ವಿಚಾರ ಆಗಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಅಲ್ಲದೇ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳಿಂದಲೂ ತನಿಖೆ ಆಗಬೇಕು. ಈ ವಂಚಕ ಕಂಪೆನಿಗಳ ಮೋಸದ ಜಾಲಕ್ಕೆ ಬಲಿಯಾಗದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವತಃ ರಾಜ್ಯ ಸರಕಾರವೇ ಕ್ರಮ ಕೈಗೊಳ್ಳಬೇಕು. ಈ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಯಾವ್ಯಾವ ಕಂಪೆನಿಗಳ ವಿರುದ್ಧ ಅರ್ಜಿ: ಐಎಂಎ (ಐ ಮಾನಿಟರಿ ಅಡ್ವೈಸರಿ) ಗ್ರೂಪ್ ಆಫ್ ಕಂಪೆನೀಸ್, ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಬುರ್ರಾಖ್ ಗ್ರೂಪ್, ಆಲಾ ವೆಂಚರ್ಸ್ ಲಿಮಿಟೆಡ್, ಟೈಫಾರ್ಪ್ ಟ್ರೇಡಿಂಗ್ ಸರ್ವಿಸ್ ಪ್ರೈ ಲಿ., ಎಸ್.ಕೆ. ಬ್ಯುಸಿನೆಸ್ ಸಲೂಷನ್ಸ್ ಎಲ್‌ಎಲ್‌ಪಿ, ಜೆಡ್.ಆರ್ ಬ್ಯುಸಿನೆಸ್ ಸಲೂಷನ್ಸ್ ಎಲ್‌ಎಲ್‌ಪಿ, ಪ್ರಾಫಿಟೋ ಇನ್ ಸರ್ವಿಸ್, ಅಜಮೇರಾ ಬ್ಯುಸಿನೆಸ್ ಸಲೂಷನ್ಸ್ ಎಲ್‌ಎಲ್‌ಪಿ, ಮೊರ್ಗೆನಲ್, ಶ್ರೀ ಕರುಲಪ್ಪುಸ್ವಾಮಿ ಪ್ರಮೋಟರ್ಸ್ ಖಾಸಗಿ ಹೂಡಿಕೆ ಕಂಪೆನಿಗಳ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News