ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧಿಸಿ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-01-23 17:14 GMT

ಬೆಂಗಳೂರು, ಜ.23: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತಿಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ-90ರ 11 ಕಿ.ಮೀ ಉದ್ದದ ರಸ್ತೆಯಲ್ಲಿ (ಮೈಸೂರು-ವಿರಾಜಪೇಟೆ ರಸ್ತೆ) ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮಾಡುವ ವಿಚಾರ ಕುರಿತು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ನಗರದ ನಿವಾಸಿಗಳಾದ ಎಚ್.ಸಿ. ಪ್ರಕಾಶ್ ಮತ್ತು ಎ.ಎಂ.ಮಹೇಶ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ, ರಾಜ್ಯ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಕೊಡಗು ಹಾಗೂ ಮೈಸೂರು ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿತು.

ಅರ್ಜಿದಾರರ ಪರ ವಕೀಲೆ ನಳೀನಾ ಮಾಯಗೌಡ ವಾದಿಸಿ, ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತಿಗೋಡು ಆನೆ ಶಿಬಿರದ ಬಳಿ ರಾಜ್ಯ ಹೆದ್ದಾರಿ ಸಂಖ್ಯೆ-90ರ 11 ಕಿ.ಮೀ ಉದ್ದದ ರಸ್ತೆ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, 2018ರ ಅ.8ರಂದು ಬಸ್‌ವೊಂದು ಢಿಕ್ಕಿ ಹೊಡೆದ ಪರಿಣಾಮ ‘ರಂಗ’ ಎಂಬ ಆನೆ ಸಾವನ್ನಪ್ಪಿತ್ತು. ಪದೇ ಪದೇ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಆದರೆ, ಈ ಘಟನೆಗಳನ್ನು ತಪ್ಪಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ ಎಂದು ದೂರಿದರು.

ವನ್ಯ ಜೀವಿಗಳ ಸಂಕ್ಷಣೆಯ ದೃಷ್ಟಿಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ-90ರ 11 ಕಿ.ಮೀ ಉದ್ದದ ರಸ್ತೆಯಲ್ಲಿ (ಮೈಸೂರು-ವಿರಾಜಪೇಟೆ ರಸ್ತೆ) ಸಂಜೆ 6ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧ ಮಾಡಬೇಕು. ರಾಜ್ಯ ಹೆದ್ದಾರಿಗಳಲ್ಲಿ ಆನೆಗಳ ಸಾವು ಸಂಭವಿಸುವುದನ್ನು ತಡೆಯಲು ವಿಫಲರಾಗಿರುವ ಅಧಿಕಾರಿಗಳನ್ನು ಗುರುತಿಸಲು ತುರ್ತು ವಿಚಾರಣೆಯೊಂದು ನಡೆಸಬೇಕು. ಆನೆಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಈ 11 ಕಿ.ಮೀ ಉದದ್ದ ರಸ್ತೆಗೆ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕು. ಈ ಸಂಬಂಧ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅಲ್ಲದೆ, ಈ 11 ಕಿ.ಮೀ ಉದ್ದ ರಸ್ತೆಯಲ್ಲಿ ತುರ್ತಾಗಿ ಸ್ಪೀಡ್ ಬ್ರೇಕರ್, ವೇಗ ನಿಯಂತ್ರಣ ಉಪಕರಣಗಳು ಮತ್ತು ವೇಗ ನಿಯಂತ್ರಣ ಸೂಚನೆಯ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News