ನಾಪತ್ತೆಯಾಗಿದ್ದ ಶನಿವಾರಸಂತೆಯ ಬಾಲಕಿ 20 ತಿಂಗಳ ನಂತರ ಮಂಡ್ಯದಲ್ಲಿ ಪತ್ತೆ

Update: 2019-01-23 17:29 GMT

ಮಡಿಕೇರಿ, ಜ.23 : ಕಳೆದ 20 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶನಿವಾರಸಂತೆಯ ನಿವಾಸಿ ಮಣಿ ಎಂಬವರ ಪುತ್ರಿ 2017ರ ಮೇ 8ರಂದು ಮನೆಯಿಂದ ಕಾಣೆಯಾಗಿದ್ದಳೆನ್ನಲಾಗಿದೆ. ಆ ಬಳಿಕ ನೆಂಟರಿಷ್ಟರ ಮನೆಗಳು ಹಾಗೂ ಇತರೆಡೆಗಳಲ್ಲಿ ಹುಡುಕಿದರೂ ಆಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಮಣಿ ಅವರು 2017ರ ಜು.20ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ ಹೇಳಿಕೆಯ ಅನ್ವಯ ಪೊಲೀಸರು ಐಪಿಸಿ ಕಲಂ 363(ಹುಡುಗಿ ಅಪಹರಣ) ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಬಳಿಕ ಈ ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಸೆನ್ ವಿಶೇಷ ಪೊಲೀಸ್ ಠಾಣೆಗೆ ವಹಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ ಸಿಬ್ಬಂದಿಗಳಾದ ಕ್ಲೆಮೆಂಟ್ ಸಲ್ಡಾನ, ಪ್ರಕಾಶ್ ಹಾಗೂ ಕಾರ್ಯಪ್ಪ ಅವರು ಸಂಗ್ರಹಿಸಿದ ಖಚಿತ ಮಾಹಿತಿ ಮೇರೆಗೆ ಸೆನ್ ವಿಶೇಷ ಪೊಲೀಸ್ ಠಾಣೆಯ ನಿರೀಕ್ಷಕ ಎಂ.ಎ.ಹರೀಶ್‍ ಕುಮಾರ್ ಅವರು ಅಪಹರಣವಾಗಿದ್ದಳೆನ್ನಲಾದ ಬಾಲಕಿ ಶ್ರೀರಂಗಪಟ್ಟಣದ ಸರಕಾರಿ ಆಸ್ಪತ್ರೆಯ ವಸತಿಗೃಹದಲ್ಲಿ ವಾಸವಾಗಿರುವುದನ್ನು ಪತ್ತೆ ಮಾಡಿದ್ದಾರೆ.

ಆಕೆಯ ವಿಚಾರಣೆ ನಡೆಸಿದ ಸಂದರ್ಭ ‘ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನಾನೇ ಮನೆಯಲ್ಲಿ ತಂದೆ ಮತ್ತು ಅಣ್ಣನಿಗೆ ಹೇಳದೆ ಮನೆ ಬಿಟ್ಟು ಬಂದಿದ್ದೆ’ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆಕೆಯನ್ನು ಆಕೆಯ ತಂದೆಯ ಜೊತೆ ಕಳುಹಿಸಿ ಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News