ಕುವೆಂಪು ಕನಸಿನ ಸಮಸಮಾಜದ ಸಾಕಾರಕ್ಕೆ ಹೋರಾಡಿ: ಯುವಜನತೆಗೆ ಕುವೆಂಪು ವಿವಿ ಕುಲಸಚಿವ ಭೋಜ್ಯಾನಾಯ್ಕ್ ಕರೆ

Update: 2019-01-23 17:48 GMT

ಚಿಕ್ಕಮಗಳೂರು, ಜ.23: ಇಂದಿನ ಪೀಳಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಕುವೆಂಪು ಅವರ ಆಶಯದಂತೆ ಸಮಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಮಾಜದ ಅನಿಷ್ಟ ಪಿಡುಗುಗಳು, ತಾರತಮ್ಯಗಳ ವಿರುದ್ಧ ಹೋರಾಡಬೇಕೆಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವ ಎಚ್.ಎಸ್.ಭೋಜ್ಯಾನಾಯ್ಕ್ ಕರೆ ನೀಡಿದರು.

ಬೆಂಗಳೂರಿನ ಮಾತೃಭೂಮಿ ಸಂಸ್ಥೆ ತನ್ನ 13ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಕುವೆಂಪು ಕಲಾ ಮಂದಿರದ ಹೇಮಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕುವೆಂಪು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕುವೆಂಪು ಅವರ ವಿಶ್ವಮಾನವ ತತ್ವವನ್ನು ಎಲ್ಲರೂ ಪಾಲಿಸಿದಾಗ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಲು ಸಾಧ್ಯ. ಆಗ ಮಾತ್ರ ಸಮಾಜದಲ್ಲಿ ಭಾವೈಕ್ಯ ಬೆಳೆಯುತ್ತದೆ, ದೇಶದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದರು.

ಕುವೆಂಪು ಅವರು ಒಂದು ಜಾತಿಗೆ ತಮ್ಮನ್ನು ಸೀಮಿತಗೊಳಿಸಲಿಲ್ಲ. ತಮ್ಮ ಬರಹಗಳ ಮೂಲಕ ಸಮಾಜ ಪಿಡುಗುಗಳು, ತಾರತಮ್ಯಗಳ ವಿರುದ್ಧ ಕಿಡಿಕಾರಿದರು. ವಿಶ್ವಮಾನವನಾಗಿಯೇ ಬದುಕಿದವರು. ಅವರ ಸಾಹಿತ್ಯ ಕೃಷಿ ಬಲ್ಲವರು, ಓದಿದವರು ಅವರಂತೆ ವಿಶ್ವಮಾನವರಾಗಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊರನಾಡು ದೇವಾಲಯದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಶಿ, ಸಮಾಜ ಮತ್ತು ದೇಶದ ಹಿತದೃಷ್ಠಿಯಿಂದ ಎಲ್ಲರೂ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಮೈಗೂಡಿಸಿಕೊಳ್ಳಬೇಕು. ನಾವು ಭಾರತೀಯರು ಶೈಕ್ಷಣಿವಾಗಿ, ಆರ್ಥಿಕವಾಗಿ, ವೈಜ್ಞಾನಿಕವಾಗಿ ಬಹಳಷ್ಟು ಬೆಳೆದಿದ್ದೇವೆ. ಆದರೆ ಜಾತಿ, ಮತ ಮತ್ತು ಧರ್ಮಗಳ ವಿಚಾರದಲ್ಲಿ ಸಂಕುಚಿತರಾಗಿ ನಾವು ಹಾಳಾಗುವುದರ ಜೊತೆಗೆ ಸಮಾಜ ಮತ್ತು ದೇಶವನ್ನೂ ಹಾಳುಗೆಡವುತ್ತಿದ್ದೇವೆ ಎಂದು ವಿಷಾದಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕುವೆಂಪು ವಿಶ್ವಮಾನವ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಸಾಧಕರಿಗೆ ಮಾಡುವ ಸನ್ಮಾನ ಮತ್ತು ಗೌರವಗಳು ಅವರನ್ನು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ನೀಡುವುದರ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್, ಮಾತೃಭೂಮಿ ಸಂಸ್ಥೆ ಕಳೆದ 13 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13 ಸಾಧಕರಿಗೆ ಸಮಾರಂಭದಲ್ಲಿ ಕುವೆಂಪು ವಿಶ್ವಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು, ತರೀಕೆರೆಯ ಬಿ.ಎಸ್.ಭಗವಾನ್ ಅವರು ಗಾಯಕ ಪಿ.ಬಿ.ಶ್ರೀನಿವಾಸ್ ಅವರ ಧಾಟಿಯಲ್ಲಿ ಹಾಡಿದ ನಾಡಗೀತೆ ಮತ್ತು ಯುಗಧರ್ಮದ ರಾಮಣ್ಣ ಅವರ ತತ್ವಪದಗಳ ಗಾಯನ ಗಮನ ಸೆಳೆಯಿತು. ಸಿದ್ದಗಂಗಾ ಮಠದ ಶತಾಯುಷಿ ಶಿವಕುಮಾರ ಸ್ವಾಮೀಜಿ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಮಾತೃಭೂಮಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ.ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು, ಪಟ್ಟಣ ಸಹಕಾರಿ ಬ್ಯಾಂಕ್‍ನ ನಿರ್ದೇಶಕಿ ಪದ್ಮಾ ತಿಮ್ಮೇಗೌಡ, ಜಾನಪದ ವಿದ್ವಾಂಸ ಡಾ.ಬಸವರಾಜ ನೆಲ್ಲಿಸರ ಉಪಸ್ಥಿತರಿದ್ದರು. ಅಜ್ಜಂಪುರ ಎಸ್.ಶೃತಿ ಕಾರ್ಯಕ್ರಮವನ್ನು ನಿರೂಪಿಸಿದರು, ಗಿರೀಶ್ ಸ್ವಾಗತಿಸಿದರು, ಇಮ್ರಾನ್ ಅಹ್ಮದ್ ಬೇಗ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News