ಬರ ಪರಿಹಾರ ಕಾರ್ಯ: ನಿರ್ಲಕ್ಷ್ಯ ಬೇಡ

Update: 2019-01-24 05:52 GMT

ರಾಜ್ಯದಲ್ಲಿ ಮತ್ತೆ ಬರಗಾಲದ ಕರಾಳ ಛಾಯೆ ಕವಿದಿದೆ. ಈಗಾಗಲೇ ಸುಮಾರು ನೂರು ತಾಲೂಕುಗಳು ಬರಗಾಲದಿಂದ ತತ್ತರಿಸಿವೆ ಎಂದು ಸರಕಾರವೇ ಪ್ರಕಟಿಸಿದೆ. ಈ ಪೈಕಿ 72 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಗುರುತಿಸಲ್ಪಡಲಾಗಿದೆ. ಇವಷ್ಟೇ ಅಲ್ಲದೆ ಇನ್ನೂ ಕೆಲ ತಾಲೂಕುಗಳು ಬರಗಾಲದ ದವಡೆಗೆ ಸಿಲುಕಿವೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ನೂರಾರು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲ ಕವಿದಿದ್ದರೆ ನಮ್ಮ ಜನಪ್ರತಿನಿಧಿಗಳು ರೆಸಾರ್ಟ್‌ಗಳಲ್ಲಿ ತಳವೂರಿ ರಾತ್ರಿ ಪಾರ್ಟಿ ಮಾಡುತ್ತ ಬಾಟಲಿ ಹಿಡಿದು ಹೊಡೆದಾಡುತ್ತಿದ್ದಾರೆ. ಆಳುವ ಮತ್ತು ಪ್ರತಿಪಕ್ಷಗಳು ಪೈಪೋಟಿಯ ಮೇಲೆ ರೆಸಾರ್ಟ್ ರಾಜಕಾರಣ ನಡೆಸಿವೆ. ಇವರಿಗೆ ತಮ್ಮನ್ನು ಚುನಾಯಿಸಿದ ಜನತೆ ಬರಗಾಲದಿಂದ ಬಳಲುತ್ತಿರುವ ಬಗ್ಗೆ ಮಾನವೀಯ ಸ್ಪಂದನೆ ಕೂಡ ಇಲ್ಲ. ಅದರಲ್ಲೂ ಗಣಿಗಾರಿಕೆಗೆ ಹೆಸರಾದ ಬಳ್ಳಾರಿ ಜಿಲ್ಲೆಯ ಶಾಸಕರಿಬ್ಬರು ಮಾನ ಮರ್ಯಾದೆ ಇಲ್ಲದೆ ರೆಸಾರ್ಟ್‌ಗಳಲ್ಲಿ ಹೊಡೆದಾಡಿಕೊಂಡಿದ್ದಾರೆ.

 ಇಂತಹ ಸಂದರ್ಭದಲ್ಲಿ ಜನರ ಬಳಿಗೆ ಹೋಗಿ ಅವರ ನೋವಿಗೆ ಸ್ಪಂದಿಸಬೇಕಾದ ಮುಖ್ಯ ಪ್ರತಿಪಕ್ಷ ಬಿಜೆಪಿಗೂ ಬರಗಾಲದ ಅರಿವಿಲ್ಲ. ಹೇಗಾದರೂ ಮಾಡಿ ಈಗಿನ ಸರಕಾರವನ್ನು ಉರುಳಿಸಿ ರಾಜ್ಯಾಧಿಕಾರ ಹಿಡಿಯುವುದೇ ಅದರ ಏಕೈಕ ಅಜೆಂಡಾ ಆಗಿದೆ. ಹೀಗಾಗಿ ಆಳುವ ಹಾಗೂ ವಿರೋಧ ಪಕ್ಷಗಳ ಬಗ್ಗೆ ಜನತೆ ಭ್ರಮ ನಿರಸನಗೊಂಡಿದ್ದಾರೆ. ಇವೆಲ್ಲದರ ನಡುವೆ ಬರ ಪರಿಸ್ಥಿತಿ ಎದುರಿಸಲು ರಾಜ್ಯದ ಮೈತ್ರಿ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಕರೆದು ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ. ಪ್ರತಿಯೊಂದು ಕಂದಾಯ ವಿಭಾಗಕ್ಕೆ ಹಿರಿಯ ಸಚಿವರನ್ನು ಒಳಗೊಂಡ ನಾಲ್ವರು ಸಚಿವ ಸಂಪುಟ ಉಪ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗೆ ಪ್ರಧಾನ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿಯೊಬ್ಬರು ಸಮನ್ವಯಾಧಿಕಾರಿಯಾಗಿದ್ದಾರೆ. ಈ ಸಮಿತಿ ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ವರದಿ ನೀಡಲಿದೆ. ಈ ನಡುವೆ ರಾಜ್ಯ ಸರಕಾರವನ್ನು ಉರುಳಿಸಲು ಬಿಜೆಪಿ ಮಸಲತ್ತು ನಡೆಸಿರುವುದರಿಂದ ಬರ ಪರಿಹಾರ ಕಾರ್ಯಕ್ಕೆ ಕೊಂಚ ಹಿನ್ನಡೆಯಾಗಿದೆ.

ಯಾವ ತಾಲೂಕಿನಲ್ಲಿ ಕಡಿಮೆ ಮಳೆಯಾಗಿದೆ, ಎಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ. ಪ್ರತೀ ಬರಪೀಡಿತ ತಾಲೂಕಿಗೂ ಬರ ಪರಿಸ್ಥಿತಿ ನಿರ್ವಹಣೆಗಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ, ಜನರು ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬರಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪ್ರತೀ ತಾಲೂಕಿಗೆ 50 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಪ್ರತೀ ತಾಲೂಕಿಗೆ 25 ಲಕ್ಷ ರೂಪಾಯಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ದನಕರುಗಳಿಗೆ ಮೇವು ಕೊರತೆ ನೀಗಿಸಲು 20.66 ಕೋಟಿ ರೂ. ವೆಚ್ಚದ 8.11 ಲಕ್ಷ ಮಿನಿ ಕಿಟ್‌ಗಳನ್ನು ಖರೀದಿಸಿ ರೈತರಿಗೆ ಉಚಿತವಾಗಿ ವಿತರಿಸಲಾಗಿದೆ.

 ಬರ ಪರಿಹಾರಕ್ಕಾಗಿ ಸರಕಾರ ಇವೆಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಇವು ಸರಿಯಾಗಿ ಜಾರಿಯಾಗಿಲ್ಲ. ಅಧಿಕಾರಶಾಹಿಯ ನಿರಾಸಕ್ತಿ ಅಸ್ಥಿರ ರಾಜಕೀಯ ವಾತಾವರಣದಿಂದಾಗಿ ಬರಗಾಲ ಪರಿಹಾರ ಕಾರ್ಯ ಚುರುಕಾಗಿ ನಡೆದಿಲ್ಲ, ಮಾಧ್ಯಮಗಳು ರಾಜಕೀಯ ಸುದ್ದಿ, ವರದಿಗಳಿಗೆ ಆಸಕ್ತಿ ತೋರಿಸುತ್ತಿರುವುದರಿಂದ ಬರಗಾಲದ ಭೀಕರತೆಯ ನೈಜ ಪರಿಸ್ಥಿತಿ ಬೆಳಕಿಗೆ ಬರುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಪ್ರತೀ ತಾಲೂಕಿಗೆ ಮಂಜೂರಾದ 50 ಲಕ್ಷ ರೂಪಾಯಿ ಬಂದಿಲ್ಲವೆಂದು ನೆಪ ಹೇಳಿ ಈಗಾಗಲೇ ಬಿಡುಗಡೆಯಾಗಿರುವ 25 ಲಕ್ಷ ರೂಪಾಯಿಯನ್ನೂ ಬಳಸಿಕೊಂಡಿಲ್ಲವೆಂದು ಮುಖ್ಯಮಂತ್ರಿಗಳೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದ ಮೈತ್ರಿ ಸರಕಾರ ಮತ್ತು ಪ್ರತಿಪಕ್ಷಗಳು ಇನ್ನಾದರೂ ಎಚ್ಚೆತ್ತು ರೆಸಾರ್ಟ್ ರಾಜಕೀಯವನ್ನು ಕೈ ಬಿಟ್ಟು ಪರಸ್ಪರ ಜೊತೆಗೂಡಿ ಬರಪರಿಹಾರ ಕಾಮಗಾರಿಗಳು ಯುದ್ಧೋಪಾದಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು, ರೈತರಿಗೆ ಭರವಸೆ ನೀಡಿದಂತೆ ಸಾಲಮನ್ನಾದಂತಹ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಬರಪರಿಹಾರಕ್ಕಾಗಿ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಪ್ರತಿಪಕ್ಷಗಳು ಸರಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಬೇಕು.

ಕರ್ನಾಟಕಕ್ಕೆ ಬರಗಾಲ ಎಂಬುದು ಬೆಂಬಿಡದ ಭೂತವಾಗಿದೆ. ಒಂದು ವರ್ಷ ಮಳೆಯಾದರೆ ಮತ್ತೆರಡು ವರ್ಷ ಮಳೆಯಾಗುವುದಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ನಿರಂತರವಾಗಿ ಬರಪೀಡಿತ ಜಿಲ್ಲೆಗಳೆಂದು ಹೆಸರಾಗಿವೆ. ಆದ್ದರಿಂದ ಸರಕಾರ ಬರಪರಿಹಾರಕ್ಕಾಗಿ ತಾತ್ಕಾಲಿಕ ಕ್ರಮಗಳನ್ನು ಕೈಗೊಂಡರೆ ಸಾಲದು. ಶಾಶ್ವತವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಶಾಶ್ವತವಾದ ಪರಿಹಾರ ಕ್ರಮಗಳನ್ನು ಕೈಗೊಂಡರೆ ಮಾತ್ರ ಜನಸಾಮಾನ್ಯರ ಸಂಕಟ ನಿವಾರಿಸಲು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ರಾಜ್ಯದ ಸಮ್ಮಿಶ್ರ ಸರಕಾರ ತಜ್ಞರ ಸಮಿತಿ ರಚಿಸಿ ಬರಗಾಲ ನಿವಾರಣೆಗಾಗಿ ಶಾಶ್ವತವಾದ ಕ್ರಮಗಳ ಬಗ್ಗೆ ಸಮಾಲೋಚಿಸಿ ಪರಿಹಾರವನ್ನು ಕಂಡುಹಿಡಿಯಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News