ನಾನು ವೆನೆಝವೆಲದ ಮಧ್ಯಂತರ ಅಧ್ಯಕ್ಷ: ಪ್ರತಿಪಕ್ಷ ನಾಯಕ ಘೋಷಣೆ

Update: 2019-01-24 14:48 GMT

ಬ್ರಸೆಲ್ಸ್ (ಬೆಲ್ಜಿಯಮ್), ಜ. 24: ವೆನೆಝುವೆಲದ ಪ್ರತಿಪಕ್ಷ ನಾಯಕ ಜುವಾನ್ ಗ್ವಾಯಿಡೊ ಅವರನ್ನು ದೇಶದ ಮಧ್ಯಂತರ ನಾಯಕ ಎಂಬುದಾಗಿ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಪ್ರಮುಖ ದೇಶಗಳು ಬುಧವಾರ ಮಾನ್ಯ ಮಾಡಿವೆ.

ಅದೇ ವೇಳೆ, ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದಕ್ಕಾಗಿ ನ್ಯಾಯೋಚಿತ ಚುನಾವಣೆಗಳನ್ನು ನಡೆಸುವಂತೆ ಐರೋಪ್ಯ ಒಕ್ಕೂಟ ಕರೆ ನೀಡಿದೆ.

ಇದರೊಂದಿಗೆ ಅಧ್ಯಕ್ಷ ನಿಕೊಲಸ್ ಮಡುರೊ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚೆಚ್ಚು ಮೂಲೆಗುಂಪಾಗುತ್ತಿದ್ದಾರೆ.

ನಾನು ಉಸ್ತುವಾರಿ ಅಧ್ಯಕ್ಷ ಎಂಬುದಾಗಿ ಗ್ವಾಯಿಡೊ, ಬುಧವಾರ ರಾಜಧಾನಿ ಕ್ಯಾರಕಸ್‌ನಲ್ಲಿ ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ಘೋಷಿಸಿದ ಬಳಿಕ, ಬ್ರೆಝಿಲ್, ಕೊಲಂಬಿಯ, ಚಿಲಿ, ಪೆರು ಮತ್ತು ಅರ್ಜೆಂಟೀನ ಮುಂತಾದ ಆ ವಲಯದ ದೇಶಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿವೆ.

ಆದರೆ, ಕ್ಯೂಬ ದೇಶವು ತನ್ನ ಕಮ್ಯುನಿಸ್ಟ್ ಮಿತ್ರ ಮಡುರೊ ಅವರಿಗೆ ಬೆಂಬಲ ನೀಡಿದೆ. ಮೆಕ್ಸಿಕೊ ಕೂಡ ತಣ್ಣಗಿನ ಬೆಂಬಲ ವ್ಯಕ್ತಪಡಿಸಿದೆ.

ತೈಲ ಸಮೃದ್ಧ ದೇಶವಾಗಿರುವ ವೆನೆಝುವೆಲವು ಮಡುರೊ ನಾಯಕತ್ವದಲ್ಲಿ ಅತ್ಯಂತ ಬಡ ದೇಶವಾಗಿ ಪರಿವರ್ತನೆಯಾಗಿದೆ.

ಮಡುರೊ ಸೇನೆಯ ನೆರವಿನಿಂದ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಅವರು ರಶ್ಯದ ಮಿತ್ರನೂ ಹೌದು. ರಶ್ಯವು ಕಳೆದ ತಿಂಗಳು, ಸೇನಾಭ್ಯಾಸದಲ್ಲಿ ಭಾಗವಹಿಸುವುದಕ್ಕಾಗಿ ಎರಡು ಪರಮಾಣು ಸಮರ್ಥ ಬಾಂಬರ್ ವಿಮಾನಗಳನ್ನು ಕಳುಹಿಸಿಕೊಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಗ್ವಾಯಿಡೊ ಅವರ ಘೋಷಣೆಯ ಕೆಲವೇ ನಿಮಿಷಗಳಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗ್ವಾಯಿಡೊ ಅವರನ್ನು ಮಧ್ಯಂತರ ನಾಯಕ ಎಂಬುದಾಗಿ ಮಾನ್ಯ ಮಾಡಿದ್ದಾರೆ ಹಾಗೂ ಅವರ ನ್ಯಾಶನಲ್ ಅಸೆಂಬ್ಲಿ ಮಾತ್ರ ‘ವೆನೆಝುವೆಲದ ಜನರಿಂದ ಆಯ್ಕೆಯಾದ ಕಾನೂನುಬದ್ಧ ಸರಕಾರಿ ಶಾಖೆಯಾಗಿದೆ ಎಂದು ಅವರು ಘೋಷಿಸಿದ್ದಾರೆ.

ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಮಡುರೊ

ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಮಡುರೊ, ನಾನು ಅಮೆರಿಕದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಅದೇ ವೇಳೆ, ಅವರ ಗಲಭೆ ನಿಗ್ರಹ ಪೊಲೀಸರು ಕ್ಯಾರಕಸ್‌ನಲ್ಲಿ ಪ್ರತಿಪಕ್ಷ ಬೆಂಬಲಿಗರೊಡನೆ ಘರ್ಷಣೆ ನಡೆಸಿದರು.

‘‘ತೊಲಗಿ! ವೆನೆಝುವೆಲವನ್ನು ಬಿಟ್ಟು ಹೋಗಿ. ನಾವು ಇಲ್ಲಿ ಘನತೆ ಹೊಂದಿದ್ದೇವೆ’’ ಎಂದು ಹೇಳಿರುವ ಮಡುರೊ, ದೇಶದಿಂದ ಹೊರಹೋಗಲು ಅಮೆರಿಕದ ರಾಜತಾಂತ್ರಿಕರಿಗೆ 72 ಗಂಟೆಗಳ ಸಮಯಾವಕಾಶ ನೀಡಿದ್ದಾರೆ.

ಮಡುರೊ ಅಧಿಕಾರವನ್ನು ಧಿಕ್ಕರಿಸಿದ ಅಮೆರಿಕ

ಅಮೆರಿಕದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವ ಮಡುರೊ ಆದೇಶಕ್ಕೆ ಪ್ರತಿಕ್ರಿಯಿಸಿರುವ ಗ್ವಾಯಿಡೊ, ನನ್ನ ಆಡಳಿತದ ವೆನೆಝುವೆಲದಲ್ಲಿ ವಿದೇಶಗಳ ರಾಜತಾಂತ್ರಿಕ ಉಪಸ್ಥಿತಿ ಇರಬೇಕೆಂದು ದೇಶ ಬಯಸುತ್ತದೆ ಎಂದು ಹೇಳಿದ್ದಾರೆ.

ಅದೇ ವೇಳೆ, ‘‘ಸಂಬಂಧ ಕಡಿದುಕೊಳ್ಳಲು ಮಾಜಿ ಅಧ್ಯಕ್ಷ ಮಡುರೊ ಅವರಿಗೆ ಅಧಿಕಾರವಿಲ್ಲ’’ ಎಂದು ಅಮೆರಿಕದ ವಿದೇಶ ಇಲಾಖೆ ಹೇಳಿದೆ.

‘ಮಧ್ಯಂತರ ನಾಯಕ’ನಿಗೆ ಬೆಂಬಲದ ಮಹಾಪೂರ

14 ದೇಶಗಳ ಲಿಮಾ ಗುಂಪಿನ 11 ದೇಶಗಳು ಜಂಟಿ ಹೇಳಿಕೆಯೊಂದನ್ನು ನೀಡಿ, ಗ್ವಾಯಿಡೊ ಅವರನ್ನು ಮಧ್ಯಂತರ ಅಧ್ಯಕ್ಷರಾಗಿ ಅಂಗೀಕರಿಸುವುದಾಗಿ ಹೇಳಿವೆ.

ಅವುಗಳೆಂದರೆ ಅರ್ಜೆಂಟೀನ, ಬ್ರೆಝಿಲ್, ಕೆನಡ, ಚಿಲಿ, ಕೊಲಂಬಿಯ, ಕೋಸ್ಟರಿಕ, ಗ್ವಾಟೆಮಾಲ, ಹೊಂಡುರಸ್, ಪನಾಮ, ಪರಾಗ್ವೆ ಮತ್ತು ಪೆರು.

ಗುಂಪಿನ ಮೂರು ದೇಶಗಳಾದ ಮೆಕ್ಸಿಕೊ, ಗಯಾನ ಮತ್ತು ಸೇಂಟ್ ಲೂಸಿಯಗಳು ಬೆಂಬಲ ನೀಡಿಲ್ಲ.

ದೇಶಾದ್ಯಂತ ಪ್ರತಿಭಟನೆ: 13 ಸಾವು

ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊ ವಿರುದ್ಧ ದೇಶಾದ್ಯಂತ ನಡೆದ ಎರಡು ದಿನಗಳ ಪ್ರತಿಭಟನೆಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಕ್ಯಾರಕಸ್‌ನಲ್ಲಿರುವ ಮಾನವಹಕ್ಕುಗಳ ಸಂಘಟನೆ ‘ವೆನೆಝುವೆಲ ಸಾಮಾಜಿಕ ಸಂಘರ್ಷ ವೀಕ್ಷಣಾಲಯ’ ತಿಳಿಸಿದೆ.

ಸಾವುಗಳು ಹೆಚ್ಚಾಗಿ ಗುಂಡಿನ ಗಾಯಗಳಿಂದಾಗಿ ಸಂಭವಿಸಿವೆ ಎಂದು ಅದು ಹೇಳಿದೆ.

ಅದೇ ವೇಳೆ, ಬ್ರೆಝಿಲ್ ಗಡಿಗೆ ಹೊಂದಿಕೊಂಡಿರುವ ರಾಜ್ಯ ಬೊಲಿವರ್‌ನಲ್ಲಿ ನಡೆದ ದೊಂಬಿ ಮತ್ತು ಲೂಟಿ ನಡೆದಿದೆ ಎಂದು ಅದು ತಿಳಿಸಿದೆ.

ಕ್ಯಾರಕಸ್‌ನಲ್ಲಿ ಸೋಮವಾರ 27 ಸೈನಿಕರು ಮಡುರೊ ವಿರುದ್ಧ ದಂಗೆ ಎದ್ದ ಬಳಿಕ ಅಶಾಂತಿ ಆರಂಭಗೊಂಡಿತು. ಭಾರೀ ಸಂಖ್ಯೆಯಲ್ಲಿ ಬೀದಿಗೆ ಇಳಿಯುವಂತೆ ಈ ಸೈನಿಕರು ಜನರಿಗೆ ಕರೆ ನೀಡಿದರು.

ಹೆಚ್ಚು ಭೀಕರ ಪ್ರತಿಭಟನೆಗಳು ಮಂಗಳವಾರ ರಾತ್ರಿ ಕ್ಯಾರಕಸ್ ಮತ್ತು ಬೊಲಿವರ್‌ಗಳಲ್ಲಿ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News