ಅವಳಿ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ
ಮೈಸೂರು,ಜ.24: ತನ್ನ ಅವಳಿ ಮಕ್ಕಳನ್ನು ನೇಣು ಬಿಗಿದು ಹತ್ಯೆ ಮಾಡಿ ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬಂಡಿಪಾಳ್ಯದಲ್ಲಿ ನಡೆದಿದೆ.
ಮೃತರನ್ನು ಬಂಡಿಪಾಳ್ಯದಲ್ಲಿ ವಾಸವಿರುವ ಆಶಾ ಗೌಡ (30) ಶೌರ್ಯ ಗೌಡ (8) ಸುಪ್ರೀತ್ ಗೌಡ (8) ಎಂದು ಗುರುತಿಸಲಾಗಿದೆ. ಆಶಾರ ಪತಿ ಮಹೇಶ್ ಎಪಿಎಂಸಿಯಲ್ಲಿ ಹಮಾಲಿ ಕೆಲಸ ನಿರ್ವಹಿಸುತ್ತಿದ್ದರು. ಪತಿ- ಪತ್ನಿ ಅನ್ಯೋನ್ಯವಾಗಿಯೇ ಇದ್ದರು ಎನ್ನಲಾಗಿದೆ.
ಪತಿ ಮಹೇಶ್ ಇಂದು ಬೆಳಗ್ಗೆ ಕೆಲಸಕ್ಕೆ ಹೋದ ನಂತರ ಎಷ್ಟು ಹೊತ್ತಾದರೂ ಆಶಾ ಮನೆಯಿಂದ ಹೊರ ಬಂದಿರಲಿಲ್ಲ. ಇದನ್ನು ಗಮನಿಸಿದ ಅಕ್ಕಪಕ್ಕದವರು ಹೋಗಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ದಂಪತಿಯ ನಡುವೆ ಯಾವುದೇ ವೈಮನಸ್ಸು ಇರಲಿಲ್ಲ, ವೈಯಕ್ತಿಕ ಕಾರಣಗಳಿಂದ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಜಯಪ್ರಕಾಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.