×
Ad

ಈ ಕೆಲಸ ಮಾಡುವ ಗ್ರಾಪಂ ಗೆ ಸಿಗಲಿದೆ ಕೋಟಿ ರೂ.ಬಹುಮಾನ !

Update: 2019-01-24 21:16 IST

ಬೆಂಗಳೂರು, ಜ.24: ರಾಜ್ಯದಲ್ಲಿ ಅಂತರ್ಜಲವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅತೀ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸುವ 60 ಗ್ರಾಮ ಪಂಚಾಯತ್ ಗಳಿಗೆ ತಲಾ ಒಂದು ಕೋಟಿ ರೂ.ಬಹುಮಾನ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದರು.

ಗುರುವಾರ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ರಾಷ್ಟ್ರೀಯ ಜಲ ಮಿಷನ್ ಮತ್ತು ರಾಜ್ಯದ ಜಲ ಸಂಪನ್ಮೂಲ ಇಲಾಖೆ ಆಯೋಜಿಸಿದ್ದ ‘ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಲಸಂಪನ್ಮೂಲ ಇಲಾಖೆಯು ಅಂತರ್ಜಲ ಸಂರಕ್ಷಣೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಪೈಕಿ ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯವು ಒಂದು. ಪ್ರತಿ ಜಿಲ್ಲೆಯಲ್ಲಿ ಅತೀ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಿಸುವ ತಲಾ ಎರಡು ಗ್ರಾಮ ಪಂಚಾಯತ್ ಗಳಂತೆ, 60 ಗ್ರಾಮ ಪಂಚಾಯತ್ ಗಳಿಗೆ ತಲಾ ಒಂದು ಕೋಟಿ ರೂ.ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.

ಅಂತರ್ಜಲ ಮಟ್ಟ ವೃದ್ಧಿಸಲು ಹೆಚ್ಚು-ಹೆಚ್ಚು ಇಂಗು ಗುಂಡಿ, ಚೆಕ್ ಡ್ಯಾಂ ನಿರ್ಮಾಣಕ್ಕೆ ರೈತರು ಮುಂದಾಗಬೇಕು. ಅವರಲ್ಲಿ ನೀರಿನ ಸಂರಕ್ಷಣೆ ಮತ್ತು ಬಳಕೆ ಬಗ್ಗೆ ಅರಿವು ಮೂಡಿಸಲು ಪ್ರತಿ ತಾಲೂಕಿನಲ್ಲೂ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ಸರಕಾರವು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಬಳಕೆ ಮಾಡುವ ವಿದ್ಯುತ್‌ಗೆ ಸಬ್ಸಿಡಿ ರೂಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ರೈತರು ಸರಕಾರಕ್ಕೆ ತೆರಿಗೆ ಕಟ್ಟುವುದಿಲ್ಲ. ಆದರೆ, ರಾಜ್ಯದ ಹಲವೆಡೆ ನದಿ ನೀರು, ನಾಲೆ, ಕಾಲುವೆಗಳಿಗೆ ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಿ, ನೀರು ಎತ್ತಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೆಲವು ಕಡೆ ಕೃತಕ ಕೆರೆಗಳ ನಿರ್ಮಾಣ ಮಾಡಿಕೊಂಡು, ನಾಲೆಗಳಿಂದ ಅಕ್ರಮವಾಗಿ ನೀರು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿರುವ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಇದರಿಂದಾಗಿ, ನಾಲೆಯ ಕೊನೆಯ ಭಾಗದಲ್ಲಿರುವ ರೈತರಿಗೆ ನೀರು ತಲುಪುವುದಿಲ್ಲ. ಈ ರೀತಿ ಅಕ್ರಮವಾಗಿ ನೀರಿನ ಸಂಪರ್ಕ ಕಲ್ಪಿಸಿಕೊಂಡಿರುವವರ ವಿರುದ್ಧ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ವರದಿ ನೀಡಲು ಸಮಿತಿಯನ್ನು ರಚಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.

ನಮ್ಮ ರಾಜ್ಯದ ಮಹಾದಾಯಿ, ಕೃಷ್ಣಾ, ಕಾವೇರಿ ಸೇರಿದಂತೆ ಹಲವು ನದಿಗಳ ನೀರಿನ ಹಂಚಿಕೆ ವಿಚಾರದಲ್ಲಿ ಅಂತರರಾಜ್ಯಗಳ ನಡುವೆ ವ್ಯಾಜ್ಯಗಳಿವೆ. ಇದೀಗ ಹೊಸದಾಗಿ ಮೇಕೆದಾಟು ಯೋಜನೆ ಸೇರ್ಪಡೆಯಾಗಿದೆ. ನಾವು ಬೇರೆಯವರಿಗೆ ತೊಂದರೆಯಾಗದಂತೆ ಯೋಜನೆಗಳನ್ನು ಕೈಗೊಂಡರೂ ವಿನಾಕಾರಣ ತಗಾದೆ ತೆಗೆಯುತ್ತಾರೆ ಎಂದು ಅವರು ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ಸಾವಿರ ಅಡಿ ಆಳಕ್ಕೆ ಹೋದರೂ ನೀರು ಸಿಗುವುದಿಲ್ಲ. ಆದರೂ, ಹನಿ ನೀರಾವರಿಯನ್ನು ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ನಡೆಸುತ್ತಾರೆ. ರೇಷ್ಮೆ ಹಾಗೂ ಹಾಲು ಉತ್ಪಾದನೆಯಲ್ಲೂ ಈ ಜಿಲ್ಲೆಗಳು ಮುಂಚೂಣಿಯಲ್ಲಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರದಂತಹ ಬರಪೀಡಿತ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಎತ್ತಿನಹೊಳೆ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಇಂತಹ ಉತ್ತಮವಾದ ಯೋಜನೆಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಜಲ ಮಿಷನ್ ನಿರ್ದೇಶಕ ನಿತೀಶ್ವರ್ ಕುಮಾರ್, ಶಾಸಕ ಡಾ.ಅಜಯ್‌ ಸಿಂಗ್, ಕೃಷಿ ವಿವಿ ಉಪ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News