ಬಾಗೇಪಲ್ಲಿಯಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತ: ಆರೋಪ

Update: 2019-01-24 16:25 GMT

ಬಾಗೇಪಲ್ಲಿ, ಜ.24: ಮಲ ಹೊರುವುದು ಹಾಗೂ ಮಲ ತೆಗೆಯುವ ಪದ್ಧತಿ ಸಂಪೂರ್ಣವಾಗಿ ನಿಷೇಧವಿದ್ದರೂ ಪಟ್ಟಣದ 7ನೇ ವಾರ್ಡಿನಲ್ಲಿ ಪುರಸಭೆಯ ದಲಿತ ಪೌರಕಾರ್ಮಿಕರು ಬರೀ ಕೈಗಳಿಂದ ಶೌಚ ಗುಂಡಿಯಿಂದ ಮಲ ತೆಗೆದಿದ್ದಾರೆ ಎಂದು ಆರೋಪಿಸಲಾಗಿದೆ.

ಜ.22 ರಂದು ಮಧ್ಯಾಹ್ನ ಪುರಸಭೆ ವ್ಯಾಪ್ತಿಯಲ್ಲಿರುವ ವ್ಯಕ್ತಿಯೊಬ್ಬರ ಮನೆಯ ಶೌಚ ಗುಂಡಿಯನ್ನು ಪುರಸಭೆಯ ಮೂವರು ಪೌರ ಕಾರ್ಮಿಕರು ಬರೀ ಕೈಗಳಿಂದ ಸ್ವಚ್ಛಗೊಳಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಜೀವಿಕಾ ಸಂಘಟನೆಯ ತಾಲೂಕು ಸಂಚಾಲಕ ನಾರಾಯಣಸ್ವಾಮಿ ಎಂಬವರು ಆರೋಪಿಸಿದ್ದಾರೆ.

ಮಂಗಳವಾರ ಬೆಳಗ್ಗೆ 12 ಗಂಟೆಗೆ 7ನೇ ವಾರ್ಡಿನಲ್ಲಿ ಕೆಲಸದ ನಿಮಿತ್ತ ಹೋಗುತ್ತಿದ್ದಾಗ ಪುರಸಭೆಯ ದಲಿತ ಪೌರಕಾರ್ಮಿಕರು ಶೌಚಗುಂಡಿಯನ್ನು ಬರೀ ಕೈಗಳಿಂದ ಸ್ವಚ್ಛಗೊಳಿಸುತ್ತಿದ್ದರು ಎಂದು ವಿವರಿಸಿದ್ದಾರೆ. ಅಲ್ಲದೆ, ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗ ಕೂಡಾ ಮುಂದುವರಿಸಿದ್ದರು ಎಂದು ಆರೋಪಿಸಿದ್ದಾರೆ.

ಮಲ ಹೊರುವ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ವಿಚಾರಿಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಪಂಕಜಾರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News