×
Ad

ಚಿಕ್ಕಮಗಳೂರು: ಚರ್ಚ್ ಮುಖ್ಯಸ್ಥನ ಸಜೀವ ದಹನಕ್ಕೆ ಯತ್ನ; ಆರೋಪ

Update: 2019-01-24 23:52 IST

ಚಿಕ್ಕಮಗಳೂರು, ಜ.24: ಕಬ್ಬಿಣದ ಸರಳುಗಳು ಕಳ್ಳತನವಾಗುವ ಭೀತಿಯಿಂದ ಕಾರಿನಲ್ಲಿ ಮಲಗಿ ಕಾವಲು ಕಾಯುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಕಾರಿಗೆ ಬೆಂಕಿ ಹಚ್ಚಿ ಚರ್ಚ್ ಮುಖ್ಯಸ್ಥರೊಬ್ಬರನ್ನು ಸಜೀವ ದಹನ ಮಾಡಲು ಯತ್ನಿಸಿದ ಘಟನೆ ತರೀಕೆರೆ ಪಟ್ಟಣದ ಜೀವವಿಮಾ ನಗರದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ ಎನ್ನಲಾಗಿದೆ. 

ತರೀಕೆರೆ ಪಟ್ಟಣದ ಜೀವವಿಮಾ ನಗರದಲ್ಲಿರುವ ಫಿಲೋಸ್ ಚರ್ಚನ ಮುಂಭಾಗದಲ್ಲಿ ಶೆಡ್ ನಿರ್ಮಾಣಕ್ಕೆಂದು ಕಬ್ಬಿಣದ ಸರಳುಗಳನ್ನು ತಂದು ಹಾಕಲಾಗಿತ್ತು. ರಾತ್ರಿ ವೇಳೆ ಕಬ್ಬಿಣದ ಸರಳುಗಳನ್ನು ಕಳ್ಳರು ಕದಿಯುವ ಭೀತಿಯಿಂದ ಚರ್ಚ್‍ನ ಮುಖ್ಯಸ್ಥರಾದ ವಿ.ಕೆ. ಪೌಲೋಸ್ ಎಂಬವರು ಬುಧವಾರ ರಾತ್ರಿ ಚರ್ಚ್‍ನ ಗೇಟ್‍ನ ಮುಂಭಾಗದಲ್ಲಿ ತಮ್ಮ ಇನೋವಾ ಕಾರು ನಿಲ್ಲಿಸಿಕೊಂಡು ಅದರಲ್ಲೇ ಮಲಗಿದ್ದರು. ಪೌಲೋಸ್ ಅವರು ಕಾರಿನೊಳಗೆ ನಿದ್ರೆಗೆ ಜಾರಿದ್ದ ವೇಳೆ ಅಪರಿಚತ ಕಿಡಿಗೇಡಿಗಳು ಕಾರಿಗೆ ಬೆಂಕಿ ನೀಡಿದ್ದಾರೆಂದು ಪೌಲೋಸ್ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಕಾರಿಗೆ ಬೆಂಕಿ ಹತ್ತಿ ಉರಿಯುತ್ತಿದ್ದ ಶಬ್ಧ ಕೇಳಿ ಪಕ್ಕದಲ್ಲೇ ಇದ್ದ ಪಲೋಸ್ ಅವರ ಮನೆಯಲ್ಲಿದ್ದ ಪತ್ನಿ ಎಚ್ಚರಗೊಂಡ ಪೌಲೋಸ್ ಅವರನ್ನು ಎಬ್ಬಿಸಿದ್ದು, ಬಳಿಕ ಪೌಲೋಸ್ ಕಾರಿನಿಂದ ಹೊರಬಂದು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಪೌಲೋಸ್ ಅವರ ಕೈಗೆ ಸುಟ್ಟ ಗಾಯಗಳಾಗಿದ್ದು, ತರೀಕೆರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಸಲಾಗಿದೆ ಎಂದು ತಿಳಿದು ಬಂದಿದೆ. 

ಘಟನೆ ಸಂಬಂಧ ಪೌಲೋಸ್ ಅವರ ಪತ್ನಿ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಪತಿಯನ್ನು ಸಜೀವ ದಹನ ಮಾಡಲು ಆರೋಪಿಸಿಗಳು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News