ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶದಿಂದ ಎನ್‍ಡಿಎಗೆ ಇನ್ನಷ್ಟು ಹಾನಿ: ಸಿದ್ದರಾಮಯ್ಯ

Update: 2019-01-25 12:48 GMT

ಬೀರೂರು, ಜ.25: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮಗೆ ಕ್ಷೇತ್ರಗಳಲ್ಲಿ ಮೈತ್ರಿ ಹೊಂದಾಣಿಕೆಗಿಂತ ಮುಖ್ಯವಾಗಿ ಬಿಜೆಪಿಯನ್ನು ಸೋಲಿಸುವುದೇ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ಯಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‍ರೊಂದಿಗೆ ಶುಕ್ರವಾರ ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಬೀರೂರಿಗೆ ಆಗಮಿಸಿ ಹಾವೇರಿಗೆ ತೆರಳುವ ಪಟ್ಟಣದ ಕೆಎಲ್‍ಕೆ ಮೈದಾನದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‍ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆ ಸೀಟು ಹೊಂದಾಣಿಕೆಯ ಬಗ್ಗೆ ಈಗಾಗಲೇ ಎರಡು ಪಕ್ಷದಲ್ಲಿ ಮಾತುಕತೆ ನಡೆದಿದೆ. ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ ಎಂದರು. 

ದೇಶದ ಪ್ರಗತಿಯ ಇತಿಹಾಸಕ್ಕೆ ಗಾಂಧಿ ಕುಟುಂಬದ ಹೆಮ್ಮೆಯ ಕುಡಿಯಾದ ಪ್ರಿಯಾಂಕ ಗಾಂಧಿಯವರಿಗೆ ಪಕ್ಷವು ಜವಾಬ್ದಾರಿಯ ಹುದ್ದೆ ನೀಡಿ ಮತ್ತೊಮ್ಮೆ ದೇಶಕ್ಕೆ ಸದೃಢ ರಾಜಕೀಯ ವಾತಾವರಣ ನಿರ್ಮಿಸುವ ಪಣತೊಡುತ್ತಿದೆ. ದೇಶದ ಸಾಮಾನ್ಯ ಜನರ ಹಿತಕ್ಕೆ ಮಾರಕವಾದ ಹಲವು ನಿರ್ಣಯಗಳನ್ನು ಕೈಗೊಂಡು ಎನ್‍ಡಿಎ ಆಡಳಿತ ಜನರಿಂದ ತಿರಸ್ಕೃತಗೊಳ್ಳುತ್ತಿದೆ. ಇತ್ತೀಚೆಗೆ ನಡೆದ ಹಲವು ರಾಜ್ಯಗಳ ಚುನಾವಣೆಯಲ್ಲಿ ಇದು ಬಿಂಬಿತವಾಗಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿ ಜನರನ್ನು ಮರುಳು ಮಾಡುತ್ತಿರುವ ಬಿಜೆಪಿ ನೇತೃತ್ವದ ಸರಕಾರ ಯುಪಿಎ ಹಾಗೂ ಕಾಂಗ್ರೆಸ್ ಏಳಿಗೆಯನ್ನು ಸಹಿಸದೇ ಜನರನ್ನು ತಪ್ಪುದಾರಿಗೆಳೆಯುತ್ತಿದೆ. ಪ್ರಿಯಾಂಕ ಗಾಂಧಿಯವರ ಆಗಮನದಿಂದ ಎನ್‍ಡಿಎಗೆ ಇನ್ನಷ್ಟು ಹಾನಿಯಾಗಲಿದೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತುಂಬಲಿದೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸಾಧನೆ ಮಾಡಲಿದೆ. ಹಲವು ದೂರದರ್ಶನ ಮಾಧ್ಯಮ ಸಮೀಕ್ಷೆಗಳು ಎನ್‍ಡಿಎ ಜನಪ್ರಿಯತೆ ಕುಸಿಯುತ್ತಿರುವುದನ್ನು ತೋರಿಸುತ್ತಿವೆ ಎಂದರು.

ಇದೇ ವೇಳೆ ಸ್ಥಳೀಯ ಸಮಸ್ಯೆಗಳ ಕುರಿತಂತೆ ಕೆಲ ಜಿಲ್ಲಾ ಮತ್ತು ತಾಪಂ ಸದಸ್ಯರು ಸಿದ್ದರಾಮಯ್ಯರವರ ಗಮನಕ್ಕೆ ತಂದು, ತಾಲೂಕಿನ ಬರ ಹಾಗೂ ನೀರಾವರಿ ಸಮಸ್ಯೆ, ಹೆದ್ದಾರಿ ನಿರ್ಮಾಣದಿಂದಾಗಿ ಭೂಮಿ ಕಳೆದುಕೊಳ್ಳುತ್ತಿರುವವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದು, ವಿಷ್ಣು ಸಮುದ್ರ ಕೆರೆಗೆ ನೀರು ಹರಿಸುವಿಕೆ ಹಾಗೂ ತಾಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಸೂಕ್ತ ಕ್ರಮವಹಿಸುವಂತೆ ಸರಕಾರದ ಮೇಲೆ ಒತ್ತಡ ಹಾಕುವಂತೆ ಕೋರಿದರು.

ಸಿದ್ದರಾಮಯ್ಯ ಹಾಗೂ ತಾಲೂಕಿನ ಬರ ಸಮಸ್ಯೆ ಅರಿಯಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‍ರವರನ್ನು ಶಾಸಕ ಬೆಳ್ಳಿಪ್ರಕಾಶ್ ಹೂಗುಚ್ಚ ನೀಡಿ ಸ್ವಾಗತಿಸಿದರು. ತಾಪಂ ಅಧ್ಯಕ್ಷೆ ಭಾರತಮ್ಮ ಪ್ರಹ್ಲಾದ್, ಜಿಪಂ ಸದಸ್ಯ ಶರತ್‍ ಕೃಷ್ಣಮೂರ್ತಿ, ಮಹೇಶ್ ಓಡೆಯರ್, ಪುರಸಭಾಧ್ಯಕ್ಷೆ ಸವಿತಾ ರಮೇಶ್, ಪುರಸಭಾ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ವಿನಾಯಕ್, ಕಾಂಗ್ರೆಸ್ ಮುಖಂಡ ಕೆ.ಎಸ್. ಆನಂದ್, ಉಪವಿಭಾಗಾಧಿಕಾರಿ ರೂಪಾ, ತಹಶಿಲ್ದಾರ್ ಮಹೇಶ್ಚಂದ್ರ, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ ಮತ್ತಿತರ ಕಾರ್ಯಕರ್ತರು ಇದ್ದರು.

ಬಿಸಿಲಿನ ನಡುವೆಯೂ ಹೆಲಿಪ್ಯಾಡ್ ಸಮೀಪದ ಮರದ ನೆರಳಿನಲ್ಲಿ ಕುಳಿತ ಸಿದ್ದರಾಮಯ್ಯ  30 ನಿಮಿಷಗಳಿಗೂ ಹೆಚ್ಚಿನ ಸಮಯ ಸಾಮಾನ್ಯರಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಕುಳಿತು ಕಾಂಗ್ರೆಸ್ ತಾಲೂಕು ಘಟಕದ ಕಾರ್ಯವೈಖರಿ ಮತ್ತು ಪಕ್ಷ ಸಂಘಟನೆಯ ಕುರಿತಂತೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಕರೆದು ಮಾತನಾಡಿದ ಅವರು, ನೀವೆಲ್ಲಾ ಏನು ಓದುತ್ತಿದ್ದೀರಿ, ನಿಮ್ಮಲ್ಲಿ ಸರ್ಕಾರಿ ಕಾಲೇಜು ಇದೆಯೇ, ಸರಕಾರಿ ಸೀಟು ಸಿಕ್ಕಿದೆಯೆ ಎಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದರು. ಕಾಲೇಜು ವಿದ್ಯಾರ್ಥಿಗಳಿಗೆ ಸರಕಾರ ಮತದಾನದ ಬಗ್ಗೆ ಅರಿವು ಮೂಡಿಸುವ ಜಾಹಿರಾತು ಬಿಡುಗಡೆ ಮಾಡಿದೆ, ಅದನ್ನು ಓದಿದ್ದೀರಾ? ಮತದಾನದ ವಯಸ್ಸಾದರೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ ಎಂದು ನಸುನಕ್ಕ ಸಿದ್ದರಾಮಯ್ಯ, ಉತ್ತಮವಾಗಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News