×
Ad

ಸಿದ್ದರಾಮಯ್ಯರ ತಾಕತ್ತು ಏನೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಗೊತ್ತಿದೆ: ಸಚಿವ ಝಮೀರ್‌ ಅಹ್ಮದ್‌

Update: 2019-01-25 20:27 IST

ಹಾವೇರಿ, ಜ.25: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದ ನಂತರ, ಪಕ್ಷ ಹೆಚ್ಚು ಬಲಿಷ್ಠವಾಗಿದೆ. ಅವರ ತಾಕತ್ತು ಏನೆಂದು ಪಕ್ಷದಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತನಿಗೂ ಗೊತ್ತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ಖಾನ್ ತಿಳಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಸಿದ್ದರಾಮಯ್ಯ ಕುರಿತು ಮಾಡಿರುವ ಆರೋಪದ ಕುರಿತು ಶುಕ್ರವಾರ ಹಾವೇರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಜನಾರ್ದನ ಪೂಜಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಪಕ್ಷ ಹೇಗಿತ್ತು. ಈಗ ಹೇಗಿದೆ ಅನ್ನೋದು ಕಾರ್ಯಕರ್ತರಿಗೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಪಕ್ಷದ ಮತ್ತಷ್ಟು ಪ್ರಬಲವಾಗಿದೆ. ಆದರೆ, ಈ ವಿಚಾರ ಜನಾರ್ದನ ಪೂಜಾರಿಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಯಾರು ಮುಗಿಸಿದ್ದಾರೆ ಎನ್ನುವುದು ಗೊತ್ತಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗಿನಿಂದಲೂ ಇದೇ ರೀತಿಯ ಅಪಪ್ರಚಾರ ನಡೆಯುತ್ತಿದೆ. ಆದರೆ, ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗುತ್ತಲೇ ಬರುತ್ತಿದೆ. ಈ ಎಲ್ಲ ವಿಚಾರಗಳನ್ನು ಪಕ್ಷದ ಕಾರ್ಯಕರ್ತರೆ ನಿರ್ಧಾರ ಮಾಡುತ್ತಾರೆ ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಪೂಜಾರಿ ಆರೋಪವೇನು?: ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸುವುದಕ್ಕೆ ಪಕ್ಷ ಸೇರಿಕೊಂಡಿದ್ದಾರೆ. ಅವರಿಂದ, ಇಂದು ಸಮ್ಮಿಶ್ರ ಸರಕಾರ ರಚನೆಯಾಗಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ಸರಕಾರ ಉಳಿದುಕೊಂಡಿದೆ ಎಂದು ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು.

ಅಲ್ಲದೆ, ಸರಕಾರ ಉಳಿಯುವಲ್ಲಿ ದೇವೇಗೌಡರ ಪಾತ್ರ ಮಹತ್ವದ್ದು. ಯಾರೂ ಕೂಡ ಅವರನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಜನಾರ್ದನ ಪೂಜಾರಿ ಹೇಳಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಜನಾರ್ದನ ಪೂಜಾರಿ, ಪದೇ ಪದೇ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News