ನಿಗಮ-ಮಂಡಳಿ ನೇಮಕಾತಿಯಲ್ಲಿ ವಿಳಂಬ: ಜೆಡಿಎಸ್ ವರಿಷ್ಠರ ನಡೆಗೆ ಶಾಸಕರ ಬೇಸರ?

Update: 2019-01-25 16:35 GMT

ಬೆಂಗಳೂರು, ಜ.25: ಸಚಿವ ಸಂಪುಟದಲ್ಲಿ ಖಾಲಿಯಿರುವ ಜೆಡಿಎಸ್ ಪಾಲಿನ ಸಚಿವ ಸ್ಥಾನ ಹಾಗೂ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡದೆ ಪಕ್ಷದ ವರಿಷ್ಠರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ, ಸಂಕ್ರಾಂತಿ ನಂತರ ನಿಗಮ, ಮಂಡಳಿಗಳಿಗೆ ನೇಮಕಾತಿ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶಾಸಕರಿಗೆ ಭರವಸೆ ನೀಡಿದ್ದರು. ಆದರೆ, ಈವರೆಗೆ ಸಂಪುಟದಲ್ಲಿ ಖಾಲಿಯಿರುವ ಒಂದು ಸ್ಥಾನ ಹಾಗೂ ನಿಗಮ, ಮಂಡಳಿ ನೇಮಕಾತಿ ಕುರಿತು ಯಾವುದೇ ಪ್ರಕ್ರಿಯೆ ಆರಂಭಿಸದಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷವು ತನ್ನ ಪಾಲಿನ ಸಂಸದೀಯ ಕಾರ್ಯದರ್ಶಿಗಳನ್ನು ಭರ್ತಿ ಮಾಡಿದೆ. ಆದರೆ, ಜೆಡಿಎಸ್ ತನ್ನ ಪಾಲಿನ ರಾಜಕೀಯ ಕಾರ್ಯದರ್ಶಿ, ಸಂಸದೀಯ ಕಾರ್ಯದರ್ಶಿ ಸ್ಥಾನಗಳನ್ನು ಭರ್ತಿ ಮಾಡಲು ಆಸಕ್ತಿ ತೋರುತ್ತಿಲ್ಲ ಎಂದು ಶಾಸಕರು ತಮ್ಮ ಆಪ್ತರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪಕ್ಷದ ವರಿಷ್ಠರು ಶಾಸಕರೊಂದಿಗೆ ಪ್ರತಿ ಬಾರಿ ಸಭೆ ನಡೆಸಿದಾಗಲೂ, ನಿಗಮ, ಮಂಡಳಿಗಳ ನೇಮಕಾತಿ ಕುರಿತು ಭರವಸೆ ನೀಡುತ್ತಾರೆ. ಆದರೆ, ಯಾವುದೇ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದರೂ, ನಾವು ಯಾವುದೇ ರೀತಿಯ ಅಧಿಕಾರವನ್ನು ಅನುಭವಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ವಿಧಾನಮಂಡಲದ ಅಧಿವೇಶನ ನಡೆಯುವ ಮುನ್ನ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದು, ಈ ವಿಚಾರದ ಕುರಿತು ಸೂಕ್ತವಾದ ತೀರ್ಮಾನವನ್ನು ವರಿಷ್ಠರು ತೆಗೆದುಕೊಳ್ಳಬೇಕು ಎಂದು ಶಾಸಕರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News