ಕರ್ನಾಟಕ ಚುನಾವಣಾ ಪ್ರಕ್ರಿಯೆಗಳಿಗೆ ರಾಷ್ಟ್ರ ಪ್ರಶಸ್ತಿ ಗರಿ

Update: 2019-01-25 16:44 GMT

ಬೆಂಗಳೂರು, ಜ.25: ರಾಜ್ಯದಲ್ಲಿ ನಡೆದ 2018ರ ಸಾಲಿನ ವಿಧಾನಸಭೆ ಚುನಾವಣಾ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯ ಕರ್ನಾಟಕ ಎಂದು ಭಾರತ ಚುನಾವಣಾ ಆಯೋಗ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಷ್ಟ್ರೀಯ ಮತದಾರರ ದಿನಾಚರಣೆ-2019ರ ಅಂಗವಾಗಿ ಭಾರತ ಚುನಾವಣಾ ಆಯೋಗ ಇಂದು ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಂದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಾದ ಸಂಜೀವ್ ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮಗಳು, ಭಾರತ ಚುನಾವಣಾ ಆಯೋಗ ಮತದಾರರ ಜಾಗೃತಿಗಾಗಿ ಬಿಡುಗಡೆ ಮಾಡಿದ್ದ ಪುಸ್ತಕ/ಕೈಪಿಡಿಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿದ್ದು, ಮತದಾನ ಮಾಡುವ ಕುರಿತು ಇವಿಎಮ್ ಮತ್ತು ವಿವಿಪ್ಯಾಟ್ ಮಾದರಿಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಿ ಜನರಿಗೆ ಬಳಸಿ ನೋಡಿ ಅನುಭವ ನೀಡುವ ಜಾಗೃತಿ ಕೈಗೊಂಡಿದ್ದು, ವಿಶೇಷವಾಗಿ ದಿವ್ಯಾಂಗ ಮತದಾರರು ಮತದಾನ ಮಾಡಲಿಕ್ಕಾಗಿ ಮನೆಯಿಂದ-ಮತಗಟ್ಟೆಗೆ-ಮರಳಿ ಮನೆಗೆ ಬಿಡಲು ವಾಹನ ವ್ಯವಸ್ಥೆ ಮಾಡಿದ್ದು ದೇಶದಲ್ಲಿಯೇ ಮೊದಲಾಗಿತ್ತು. ದಿವ್ಯಾಂಗರಿಗಾಗಿ ಮತದಾನದ ಕುರಿತು ತಿಳಿದುಕೊಳ್ಳಲು ಮೊದಲ ಬಾರಿಗೆ ಅವರಿಗಾಗಿ ಬ್ರೈಲ್ ಲಿಪಿಯಲ್ಲಿ ಕೈಪಿಡಿಗಳನ್ನು ಮತ್ತು ಮತದಾರರ ಗುರುತಿನ ಚೀಟಿಯನ್ನು ಸಹ ಮುದ್ರಿಸಲಾಗಿತ್ತು. ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಕೈಗೊಂಡ ಈ ರೀತಿಯ ನೂತನ ಜಾಗೃತಿ ಕಾರ್ಯಕ್ರಮಗಳು ಮತ್ತು ಚುನಾವಣಾ ಪ್ರಕ್ರಿಯೆಗಳು ಕರ್ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸುವಲ್ಲಿ ಮುಖ್ಯ ಪಾತ್ರವಹಿಸಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News