ಸಶಕ್ತ ಭಾರತ ನಿರ್ಮಾಣಕ್ಕೆ ಅನೇಕ ಮಹನೀಯರ ಕೊಡುಗೆ: ಸಚಿವ ಸಿ.ಎಸ್.ಶಿವಳ್ಳಿ

Update: 2019-01-26 14:55 GMT

ಧಾರವಾಡ, ಜ.26: ಭಾರತ ದೇಶ ಇಂದು ವಿಶ್ವದ ಬಲಿಷ್ಠ, ಮುಂದುವರಿದ ರಾಷ್ಟ್ರಗಳಿಗೆ ಮಾದರಿಯಾಗಿದೆ. ಇಲ್ಲಿನ ನೀತಿ, ಮೌಲ್ಯ, ಅಭಿವೃದ್ಧಿ ವೇಗ, ತಾಂತ್ರಿಕ ನೈಪುಣ್ಯತೆಗಳು ಜಗತ್ತಿನ ಉಳಿದ ರಾಷ್ಟ್ರಗಳನ್ನು ಮೀರಿ ನಿಂತಿದೆ ಎಂದು ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ತಿಳಿಸಿದರು.

ಶನಿವಾರ ಧಾರವಾಡ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅನೇಕ ಮಹನೀಯರ ಕೊಡುಗೆಯಿಂದ ಈ ಸಾಧನೆ ಸಾಧ್ಯವಾಗಿದೆ. ಅವರ ಶ್ರಮ, ತ್ಯಾಗ, ಸಾಧನೆಗಳನ್ನು ಸ್ಮರಿಸುವ ಪುಣ್ಯಕಾಲ ಗಣರಾಜ್ಯೋತ್ಸವವಾಗಿದೆ ಎಂದರು.

ರಾಷ್ಟ್ರವು ಸ್ವತಂತ್ರಗೊಂಡ ಸಂದರ್ಭದಲ್ಲಿ ಭಾರತಕ್ಕೆ ಅತೀ ಜರೂರಾಗಿ ಮಾಡಬೇಕಾದ ಕಾರ್ಯ, ಸಂವಿಧಾನ ರಚನೆ ಆಗಿತ್ತು. ಡಾ.ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಲಾಯಿತು. ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂಧಾನ ಕರಡು ಸಮಿತಿ ರಚಿಸಿ, 1950ರ ಜ.26ರಂದು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾತಂತ್ರ, ಗಣರಾಜ್ಯವಾಗಿ ಘೋಷಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ರೈತರ ಸಾಲಮನ್ನಾ ಕಾರ್ಯಕ್ರಮವನ್ನು ಜಾರಿ ಮಾಡುವ ಮೂಲಕ ಅನ್ನದಾತರಿಗೆ ಆತ್ಮ ವಿಶ್ವಾಸ ಮೂಡಿಸಿದೆ. ಬೆಳೆಸಾಲ ಮನ್ನಾ ಯೋಜನೆಯು ರಾಜ್ಯದ 40 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ. ಬಡವರ ಬಂಧು ಕಾರ್ಯಕ್ರಮದ ಮೂಲಕ ನೋಂದಾಯಿತ ಬೀದಿ ಬದಿಯ ವ್ಯಾಪಾರಿಗಳಿಗೆ 10 ಸಾವಿರ ರೂ.ವರೆಗೆ ಬಡ್ಡಿರಹಿತ ಸಾಲವನ್ನು ನೀಡುವುದು ಸರಕಾರದ ಬಡವರ ಪರ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಶಿವಳ್ಳಿ ತಿಳಿಸಿದರು.

‘ಕಾಂಪಿಟ್ ವಿತ್ ಚೈನಾ’ ಉದ್ದೇಶದಿಂದ ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆ ಮೂಲಕ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಮಾತೃ ಶ್ರೀ ಕಾರ್ಯಕ್ರಮದಡಿ ತಾಯಿ-ಮಗುವಿನ ಆರೋಗ್ಯ ಕಾಳಜಿಗಾಗಿ ‘ಮುಖ್ಯಮಂತ್ರಿಗಳ ಮಾತೃಶ್ರೀ’ ಯೋಜನೆ ಮೂಲಕ ಬಡ ಗರ್ಭಿಣಿ ಮಹಿಳೆಗೆ ಹೆರಿಗೆಗೆ ಮೊದಲು ಮತ್ತು ನಂತರದ ಮೂರು ತಿಂಗಳು ಮಾಸಿಕ 1 ಸಾವಿರ ರೂ. ಸಹಾಯಧನವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ದುರ್ಬಲರಿಗೆ ಜೀವನ ಭದತ್ರೆಗಾಗಿ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಮಾಶಾಸನ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಎಲ್ಲರಿಗೂ ಸಮಾನವಾದ ಶಿಕ್ಷಣ ದೊರೆಯುವಂತೆ ಮಾಡಲು ಶಾಲೆ, ಕಾಲೇಜುಗಳ ಮೂಲ ಸೌಕರ್ಯ ಅಭಿವೃದ್ಧಿಗೆ 1200 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಿವಳ್ಳಿ ತಿಳಿಸಿದರು.

ರೈತರ ಸುಮಾರು ವರ್ಷಗಳ ಹೋರಾಟದ ಫಲವಾಗಿ ಬಹು ಬೇಡಿಕೆಯ ಮಹಾದಾಯಿ ನದಿ ನೀರಿನ ತೀರ್ಪು ಕರ್ನಾಟಕ ರಾಜ್ಯದ ಪರವಾಗಿ ಬಂದಿರುವುದು ನಮ್ಮೆಲ್ಲರಿಗೂ ಅತೀವ ಸಂತೋಷ ನೀಡುವ ವಿಷಯವಾಗಿದೆ ಎಂದು ಅವರು ಹೇಳಿದರು. ಬಡವರಿಗೆ ಉಚಿತವಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಆರೋಗ್ಯ ಕರ್ನಾಟಕದಲ್ಲಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ವಿದ್ಯಾಸಿರಿ ಮತ್ತು ಮನಸ್ವಿನಿ, ಮೈತ್ರಿ ಯೋಜನೆಗಳ ಮೂಲಕ ಎಲ್ಲ ವರ್ಗದ ಜನರಿಗೆ ಸಹಾಯ ಸಿಗುವಂತೆ ಸರಕಾರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ ಎಂದು ಶಿವಳ್ಳಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ್, ಎಸ್ಪಿ ಸಂಗೀತಾ, ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ, ಉಪ ವಿಭಾಗಾಧಿಕಾರಿ ಮುಹಮ್ಮದ್ ಝುಬೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News