ಮೈತ್ರಿ ಸರಕಾರ ‘ಎಲ್‌ಓಸಿ’ಯಲ್ಲಿದೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ, ಜ. 26: ‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಎಲ್‌ಓಸಿ(ಗಡಿ ನಿಯಂತ್ರಣ ರೇಖೆ)ಯಲ್ಲಿದ್ದು, ಯಾರೂ, ಯಾವಾಗ ಬೇಕಾದರೂ ಗುಂಡು ಹಾರಿಸಬಹುದು. ಚಾಣಾಕ್ಷರು ಮಾತ್ರ ಎಲ್‌ಓಸಿ ದಾಟುತ್ತಾರೆ. ಇಲ್ಲ ಅಂದರೆ ಅಷ್ಟೇ’ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾವು ಅತ್ಯಂತ ಎಚ್ಚರಿಕೆಯಿಂದಲೇ ಇದ್ದೇವೆ. ಆಪರೇಷನ್ ಕಮಲ ಮುಂದುವರಿಯಲಿದ್ದು, ಮೈತ್ರಿ ಸರಕಾರ ಅವಧಿ ಪೂರ್ಣಗೊಳ್ಳುವವರೆಗೂ ಎಚ್ಚರಿಕೆಯಿಂದಲೇ ಇರಬೇಕು ಎಂದು ಹೇಳಿದರು.
ರಾಜಸ್ಥಾನದಲ್ಲಿರುವ ಸೈನಿಕರು ನಿರಾತಂಕವಾಗಿ ಇರುತ್ತಾರೆ. ಆದರೆ, ಜಮ್ಮು- ಕಾಶ್ಮೀರದಲ್ಲಿನ ಯೋಧರ ಪರಿಸ್ಥಿತಿಯೇ ಬೇರೆ ಎಂದು ತಮ್ಮದೆ ದಾಟಿಯಲ್ಲಿ ವಿಶ್ಲೇಷಿಸಿದ ಸತೀಶ್ ಜಾರಕಿಹೊಳಿ, ಲೋಕಸಭೆ ಚುನಾವಣೆ ಗೆಲ್ಲುವುದು ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು.
ನಗರದಲ್ಲಿ 5ಕೋಟಿ ರೂ.ವೆಚ್ಚದಲ್ಲಿ ಸಾವಗಾಂವ ಗ್ರಾಮದಲ್ಲಿ ರಷ್ಯಾ ಮಾದರಿಯಲ್ಲಿ ಕುಸ್ತಿ ಮೈದಾನ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಬೆಳಗಾವಿ ಹಾಗೂ ಖಾನಾಪುರ ರಸ್ತೆ ಅಗಲೀಕರಣಕ್ಕಾಗಿ 22 ಸಾವಿರ ಮರಗಳನ್ನು ಕಡಿಯುವುದಕ್ಕೆ ಅನುಮತಿ ಪಡೆಯಲಾಗಿದೆ. ಬೇರೆ ಕಡೆಗಳಿಗೆ ಗಿಡ ನೆಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಸಿಗಬಹುದೆಂಬ ನಿರೀಕ್ಷೆ ಇತ್ತು. ಮುಂದಿನ ವರ್ಷ ನೀಡುವ ಅವಕಾಶವಿದೆ. ಈ ಬಗ್ಗೆ ಕೇಂದ್ರ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಬಿಜೆಪಿ ಮುಖಂಡರು ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು.