ಪ್ರಧಾನಿ ಹುದ್ದೆಗೆ ರಾಹುಲ್: ತೇಜಸ್ವಿ ಯಾದವ್ ಹೇಳಿದ್ದೇನು?

Update: 2019-01-27 14:06 GMT

ಹೊಸದಿಲ್ಲಿ, ಜ.27: ಓರ್ವ ಉತ್ತಮ ಪ್ರಧಾನಿಯಾಗಲು ಅಗತ್ಯವಿರುವ ಅರ್ಹತೆಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಲ್ಲಿದೆ ಎಂದು ಆರ್‌ ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಅಪಪ್ರಚಾರ ಮಾಡಲು ಬಿಜೆಪಿಯ ಪ್ರಚಾರ ವಿಭಾಗವು ಸಾವಿರಾರು ಕೋಟಿ ರೂಪಾಯಿಯನ್ನು ವ್ಯಯಿಸಿದೆ . ತನ್ನ ವಿರುದ್ಧದ ನಕಾರಾತ್ಮಕ ಪ್ರಚಾರದ ಬಳಿಕವೂ ರಾಹುಲ್ ತನ್ನ ಪರಿಶ್ರಮ, ಸ್ನೇಹಪರತೆ ಮತ್ತು ಹೃದಯ ವೈಶಾಲ್ಯದಿಂದ ಜನರ ಮನ ಗೆದ್ದಿದ್ದಾರೆ . 15 ವರ್ಷ ಸಂಸತ್ತಿನಲ್ಲಿದ್ದಾರೆ. ಪಕ್ಷದ ಸರಕಾರವಿರುವ ಐದು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಮರ್ಥ ನಾಯಕತ್ವ ಒದಗಿಸುತ್ತಿದ್ದಾರೆ. ದೇಶದ ಅತ್ಯಂತ ಹಳೆಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಪ್ರಧಾನಿಯಾಗಲು ಬೇಕಾದ ಎಲ್ಲಾ ಅರ್ಹತೆಗಳೂ ಅವರಲ್ಲಿವೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಯಾದವ್ ಹೇಳಿದ್ದಾರೆ.

ಆದರೂ, ಮುಂದಿನ ಪ್ರಧಾನಿ ಯಾರಾಗಬೇಕು ಎಂಬುದನ್ನು 2019ರ ಚುನಾವಣೆ ಬಳಿಕ ಮಹಾಮೈತ್ರಿಯ ಸದಸ್ಯ ಪಕ್ಷಗಳು ನಿರ್ಧರಿಸುತ್ತವೆ ಎಂದವರು ತಿಳಿಸಿದ್ದಾರೆ. ಇತ್ತೀಚೆಗೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನಾಯಕತ್ವಕ್ಕೆ ದೊರೆತ ಯಶಸ್ಸು ಪಕ್ಷದ ಕಾರ್ಯಕರ್ತರಲ್ಲಿ ಹಾಗೂ 2014ರ ಚುನಾವಣೆಯಲ್ಲಿ ಮೋದಿ ವಿರುದ್ಧ ಮತ ಚಲಾಯಿಸಿದ್ದ ದೇಶದ ಶೇ.64 ಮತದಾರರಲ್ಲಿ ಹೊಸ ಶಕ್ತಿ ಮತ್ತು ಆತ್ಮವಿಶ್ವಾಸ ತುಂಬಿದೆ ಎಂದವರು ಹೇಳಿದ್ದಾರೆ. ಬಿಜೆಪಿ ಪಕ್ಷದಲ್ಲಿ ಸರ್ವಾಧಿಕಾರ ಪ್ರವೃತ್ತಿ ಮತ್ತು ನಾಯಕರ ಮುಖಸ್ತುತಿ ನಡೆಸುವ ಚಾಳಿಯಿದೆ. ಆದರೆ ಪ್ರಜಾಪ್ರಭುತ್ವ ಎಂಬುದು ಜನಕೇಂದ್ರಿತ ವ್ಯವಸ್ಥೆಯಾಗಬೇಕು ಎಂಬುದು ನಮ್ಮ ಆಶಯವಾಗಿದೆ. 2004ರ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಅಭ್ಯರ್ಥಿಯಾಗಿರಲಿಲ್ಲ. ಆದರೆ ಚುನಾವಣಾ ಫಲಿತಾಂಶದ ಬಳಿಕ ಎಲ್ಲಾ ಪಕ್ಷಗಳ ನಾಯಕರು ಸೇರಿ ಅವರನ್ನು ಆಯ್ಕೆ ಮಾಡಿದರು. ಅವರು 10 ವರ್ಷ ಯಶಸ್ವಿಯಾಗಿ ಸರಕಾರವನ್ನು ಮುನ್ನಡೆಸಿದರು ಎಂದು ಯಾದವ್ ಹೇಳಿದರು.

ಯುಪಿಎ-1ನ್ನು ಒಗ್ಗೂಡಿಸುವಲ್ಲಿ ತನ್ನ ತಂದೆ ಲಾಲೂಪ್ರಸಾದ್ ಯಾದವ್ ಅವರ ಪಾತ್ರ ಮಹತ್ವದ್ದಾಗಿದೆ. ಆದರೆ ತಾನಿನ್ನೂ ಕಿರಿಯನಾಗಿದ್ದು ರಾಜಕೀಯದಲ್ಲಿ ನಾಯಕನಲ್ಲ, ವಿದ್ಯಾರ್ಥಿ ಅಷ್ಟೇ. ಆರ್‌ಜೆಡಿ ಪಕ್ಷದ ಯಾವುದೇ ಮುಖಂಡ ಲಾಲೂ ಪ್ರಸಾದ್ ಅವರಂತೆ ಮುಂದಾಳತ್ವ ವಹಿಸಿದರೆ ತಾನದನ್ನು ಸ್ವಾಗತಿಸುತ್ತೇನೆ ಎಂದರು. ಬಿಜೆಪಿಯು ತನ್ನ ಕೈಗೊಂಬೆ ತನಿಖಾ ಸಮಿತಿಗಳ ಮೂಲಕ(ಸಿಬಿಐ , ಇಡಿ) ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದೆ ಎಂದವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News