ನಾಯಕರ ಗೌರವಾರ್ಥ ಪ್ರತಿಮೆ, ಸ್ಮಾರಕಗಳ ಬದಲು ಆಸ್ಪತ್ರೆ,ಶಾಲೆಗಳನ್ನು ಸ್ಥಾಪಿಸಿ: ಹೈಕೋರ್ಟ್

Update: 2019-01-27 14:55 GMT

ಚೆನ್ನೈ,ಜ.27: ಸಾರ್ವಜನಿಕರ ಹಣದಲ್ಲಿ ಪ್ರತಿಮೆಗಳು ಮತ್ತು ಸ್ಮಾರಕಗಳನ್ನು ನಿರ್ಮಿಸಲು ಪೈಪೋಟಿಗಿಳಿದಿರುವ ರಾಜಕೀಯ ಪಕ್ಷಗಳ ತೆವಲನ್ನು ಪರೋಕ್ಷವಾಗಿ ತರಾಟೆಗೆತ್ತಿಕೊಂಡಿರುವ ಮದ್ರಾಸ್ ಉಚ್ಚ ನ್ಯಾಯಾಲಯವು, ಮಹಾನ್ ನಾಯಕರಿಗೆ ಗೌರವ ಮತ್ತು ಸ್ಮರಣಾರ್ಥ ಪ್ರತಿಮೆಗಳು ಮತ್ತು ಸ್ಮಾರಕಗಳ ನಿರ್ಮಾಣದ ಬದಲು ಆಸ್ಪತ್ರೆಗಳು,ಶಾಲೆಕಾಲೇಜುಗಳ ನಿರ್ಮಾಣ,ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಜೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಸಾರ್ವಜನಿಕ ಹಣವನ್ನು ಬಳಸಬಹುದು. ಇದರಿಂದಾಗಿ ಅಂತಹ ನಾಯಕರ ನೆನಪು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗುತ್ತದೆ ಎಂದು ಹೇಳಿದೆ.

ಚೆನ್ನೈನ ಮರಿನಾ ಬೀಚ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ಸಮಾಧಿ ಸ್ಥಳದಲ್ಲಿ ತಮಿಳುನಾಡು ಸರಕಾರದಿಂದ 50 ಕೋ.ರೂ.ಗಳ ವೆಚ್ಚದಲ್ಲಿ ಅವರಿಗಾಗಿ ಸ್ಮಾರಕ ನಿರ್ಮಾಣವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಂ.ಸತ್ಯನಾರಾಯಣ ಮತ್ತು ಪಿ.ರಾಜಮಾಣಿಕ್ಯಂ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಅಕ್ರಮ ಸಂಪತ್ತು ಪ್ರಕರಣದಲ್ಲಿ ಜಯಲಲಿತಾರನ್ನು ದೋಷಿಯೆಂದು ಬಣ್ಣಿಸುವಂತಿಲ್ಲ ಎನ್ನುವುದನ್ನು ಎತ್ತಿ ಹಿಡಿದ ಪೀಠವು ಅರ್ಜಿಯನ್ನು ವಜಾಗೊಳಿಸಿತಾದರೂ,ರಾಜ್ಯ ಸರಕಾರವು ಭವಿಷ್ಯದಲ್ಲಿ ಮಹಾನ್ ನಾಯಕರ ಸ್ಮರಣಾರ್ಥ ಆಸ್ಪತ್ರೆಗಳು,ಶಾಲೆಕಾಲೇಜುಗಳ ನಿರ್ಮಾಣ,ನಾಗರಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಲು ನೀತಿ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿತು.

ಮಾಜಿ ಮುಖ್ಯಮಂತ್ರಿಗಳು ಮತ್ತು ದೇಶದ ನಾಯಕರ ಗೌರವಾರ್ಥ ಸ್ಮಾರಕಗಳ ನಿರ್ಮಾಣ ಒಂದು ನಿಯಮವೇ ಆಗಿಬಿಟ್ಟಿದೆ ಮತ್ತು ಇಂತಹ ಸ್ಮಾರಕಗಳು ನಾಯಕರು ರಾಜ್ಯ/ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಜನರಿಗೆ ನೆನಪಿಸುತ್ತವೆ ಎನ್ನುವುದು ಇದಕ್ಕೆ ಸಮರ್ಥನೆಯಾಗಿದೆ ಎಂದು ನ್ಯಾಯಾಲಯವು ಬೆಟ್ಟು ಮಾಡಿತು.

ಅಂದ ಹಾಗೆ ಪ್ರತಿಮೆಗಳ ನಿರ್ಮಾಣಕ್ಕೆ ಪೈಪೋಟಿ ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ಅಹ್ಮದಾಬಾದ್‌ನಲ್ಲಿ 3,000 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಉದ್ಘಾಟಿಸಿದ್ದರೆ,ಮಹಾರಾಷ್ಟ್ರ ಸರಕಾರವು ಮುಂಬೈ ಸಮೀಪ ಕಡಲಿನಲ್ಲಿ 1,200ಕೋ.ರೂ.ವೆಚ್ಚದಲ್ಲಿ ಶಿವಾಜಿ ಪ್ರತಿಮೆಯನ್ನು ನಿರ್ಮಿಸುತ್ತಿದೆ. ಎರಡು ದಿನಗಳ ಹಿಂದಷ್ಟೇ 100 ಕೋ.ರೂ.ವೆಚ್ಚದಲ್ಲಿ ಶಿವಸೇನೆಯ ದಿವಂಗತ ನಾಯಕ ಬಾಳ್ ಠಾಕ್ರೆಯವರಿಗಾಗಿ ಸ್ಮಾರಕ ನಿರ್ಮಾಣಕ್ಕೂ ಅದು ಒಪ್ಪಿಗೆ ನೀಡಿದೆ. ಅತ್ತ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News