ಹೊಳಪು ಕಳೆದುಕೊಳ್ಳುತ್ತಿರುವ ರತ್ನ

Update: 2019-01-28 05:19 GMT

ಹಿರಿಯ ಸಾಧಕರಿಗೆ ಈ ದೇಶ ನೀಡುವ ಅತ್ಯುನ್ನತ ಗೌರವವೆಂದು ‘ಭಾರತರತ್ನವನ್ನು ಗುರುತಿಸಲಾಗಿದೆ. ಈ ದೇಶಕ್ಕಾಗಿ ಶ್ರೇಷ್ಠ ಕೊಡುಗೆಗಳನ್ನು ನೀಡಿದ ಮಹನೀಯರಿಗೆ ಸಲ್ಲುವ ಪ್ರಶಸ್ತಿ ಇದು. ಯಾವುದೇ ಪ್ರಶಸ್ತಿಯನ್ನು ‘ಅತ್ಯುನ್ನತ’ ಎಂದು ಘೋಷಿಸಿದಾಕ್ಷಣ ಅದನ್ನು ಪಡೆದವರು ಅತ್ಯುನ್ನತರಾಗುವುದಿಲ್ಲ ಅಥವಾ ಪ್ರಶಸ್ತಿಯೂ ಅತ್ಯುನ್ನತ ಎನ್ನಿಸಿಕೊಳ್ಳುವುದಿಲ್ಲ. ಯಾವಾಗ ಅದು ನಿಜವಾದ ಸಾಧಕರಿಗೆ ಸಲ್ಲುತ್ತಾ ಹೋಗುತ್ತದೆಯೋ ಆಗ ಆ ಪ್ರಶಸ್ತಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ನೊಬೆಲ್ ಪ್ರಶಸ್ತಿ ವಿಶ್ವಪ್ರಸಿದ್ಧವಾದುದೇನೋ ನಿಜ. ಆದರೆ ಕೆಲವು ವಿಶ್ವ ಪ್ರಸಿದ್ಧಿಯನ್ನು ಪಡೆದವರು ಆ ನೊಬೆಲ್ ಪ್ರಶಸ್ತಿಯನ್ನೇ ತಿರಸ್ಕರಿಸುವ ಮೂಲಕ ಪ್ರಶಸ್ತಿಗಿಂತಲೂ ಎತ್ತರಕ್ಕೇರಿದರು. ಅಂಬೇಡ್ಕರ್, ಮಹಾತ್ಮಾಗಾಂಧೀಜಿಯಂತಹ ನಾಯಕರು ನೊಬೆಲ್ ಪ್ರಶಸ್ತಿ ಪಡೆದಿಲ್ಲ ಎನ್ನುವ ಕಾರಣಕ್ಕಾಗಿ ವಿಶ್ವ ಅವರನ್ನು ತಿರಸ್ಕರಿಸಿಲ್ಲ. ಇದೇ ಸಂದರ್ಭದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಎಷ್ಟೋ ಜನರನ್ನು ವಿಶ್ವ ಮರೆತೇ ಬಿಟ್ಟಿದೆ. ಆದುದರಿಂದಲೇ, ಪ್ರಶಸ್ತಿಯ ಹಿರಿಮೆ ಹೆಚ್ಚಾಗುವುದು ಆ ಪ್ರಶಸ್ತಿಗೆ ಭಾಜನರಾದ ವ್ಯಕ್ತಿತ್ವದ ಕಾರಣಕ್ಕಾಗಿ.

ಅದೆಷ್ಟೇ ಶ್ರೇಷ್ಠ ಪ್ರಶಸ್ತಿಯಾದರೂ, ಅದು ರಾಜಕೀಯ ಕಾರಣಗಳಿಂದ ಅನರ್ಹರಿಗೆ ಸಲ್ಲುತ್ತಾ ಹೋದಂತೆ ಅದು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಇದು ಯಾವ ಹಂತಕ್ಕೆ ಹೋಗಬಹುದೆಂದರೆ ಆ ಶ್ರೇಷ್ಠ ಪ್ರಶಸ್ತಿಯನ್ನು ನಿಜವಾದ ಅರ್ಹರು ಸ್ವೀಕರಿಸುವುದಕ್ಕೆ ಹಿಂಜರಿಯುವವರೆಗೆ. ಈ ಬಾರಿ ಭಾರತರತ್ನ ಮೂವರು ಹಿರಿಯರಿಗೆ ಸಂದಿದೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಆರೆಸ್ಸೆಸ್‌ನ ಹಿರಿಯ ಚಿಂತಕ ನಾನಾಜಿ ದೇಶಮುಖ್ ಹಾಗೂ ಖ್ಯಾತ ಗಾಯಕ ಭೂಪೇನ್ ಹಝಾರಿಕಾ. ಇತ್ತೀಚೆಗೆ ನಿಧನರಾಗಿದ್ದ ಸಿದ್ದಗಂಗಾ ಸ್ವಾಮೀಜಿಗಳ ನಿಷ್ಕಲ್ಮಶ ಸೇವೆಗಾಗಿ ಭಾರತ ರತ್ನ ದೊರಕಬಹುದು ಎಂದು ನಿರೀಕ್ಷಿಸಿದ್ದ ದೇಶದ ಜನತೆಗೆ ತೀವ್ರ ನಿರಾಶೆಯಾಗಿದೆ. ಈ ನಿರಾಶೆಗೆ ಮತ್ತೊಂದು ಮುಖ್ಯ ಕಾರಣವಿದೆ. ಪ್ರಶಸ್ತಿ ದೊರಕಿದವರು ಸಿದ್ದಗಂಗಾ ಸ್ವಾಮೀಜಿಗಿಂತ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡವರಾದರೆ ಕೇಂಂದ್ರದ ನಿರ್ಧಾರಕ್ಕೆ ತಲೆಬಾಗಬಹುದಾಗಿತ್ತು. ಸಿದ್ದಗಂಗಾ ಅವರನ್ನು ಬದಿಗಿಟ್ಟು ಈ ಮೂವರಿಗೆ ತರಾತುರಿಯಿಂದ ಭಾರತರತ್ನವನ್ನು ನೀಡುವ ಅಗತ್ಯವೇನಿತ್ತು ಎನ್ನುವುದು ಮಾತ್ರ ಇನ್ನೂ ಒಗಟಾಗಿಯೇ ಉಳಿದಿದೆ. ಪ್ರಶಸ್ತಿ ಪಡೆದ ಮೂವರೂ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ರಾಷ್ಟ್ರಪತಿಯಾಗುವುದು ‘ಭಾರತ ರತ್ನ’ ಪಡೆಯುವುದಕ್ಕಿರುವ ಅರ್ಹತೆಯೇನೂ ಅಲ್ಲ. ಅವರು ಆ ಸ್ಥಾನವನ್ನು ಅಲಂಕರಿಸಿ ಸಾಧಿಸಿದ ಸಾಧನೆಗಳ ಹೆಗ್ಗಳಿಕೆಯ ಆಧಾರದಲ್ಲಿ ಭಾರತರತ್ನವನ್ನು ನೀಡಬೇಕಾಗಿದೆ.

ಈ ದೇಶದ ಅರ್ಥಸಚಿವರಾಗಿ ಅತ್ಯಂತ ಕಳಪೆ ಸಾಧನೆಯನ್ನು ತೋರಿಸಿದವರು ಪ್ರಣವ್ ಮುಖರ್ಜಿ. ಕಾಂಗ್ರೆಸ್‌ನೊಳಗಿದ್ದು ಆರೆಸ್ಸೆಸ್ ಕುರಿತಂತೆ ಒಲವಿದ್ದ ಮುಖರ್ಜಿ, ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಸಮಯವನ್ನು ತಿರುಪತಿ ಭೇಟಿಗಾಗಿಯೇ ಸವೆಸಿದವರು. ಮುಖರ್ಜಿ ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರನ್ನು ಹೋಲುತ್ತಾರೆ. ಕಾಂಗ್ರೆಸ್‌ನೊಳಗಿದ್ದರೂ ಪ್ರಣವ್ ಮುಖರ್ಜಿ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಇಷ್ಟವಾಗುವುದು ಇದೇ ಕಾರಣಕ್ಕೆ. ಇವೆಲ್ಲಕ್ಕೂ ತಿಲಕವಿಟ್ಟಂತೆ, ಕೆಲವು ತಿಂಗಳ ಹಿಂದೆ ಆರೆಸ್ಸೆಸ್ ಕಾರ್ಯಕ್ರಮವೊಂದರಲ್ಲಿ ಮುಖರ್ಜಿ ಅವರು ಬಹಿರಂಗವಾಗಿ ಗುರುತಿಸಿಕೊಂಡರು. ಒಂದು ಪಕ್ಷದಲ್ಲಿದ್ದು ಅದರ ಸರ್ವ ಫಲಾನುಭವಿಯಾಗಿ ನಿವೃತ್ತರಾದ ಬಳಿಕ ಇನ್ನೊಂದು ಪಕ್ಷದ, ಸಿದ್ಧಾಂತದ ವೇದಿಕೆಯೇರುವುದಕ್ಕೆ ಅಪಾರ ಆತ್ಮವಿಶ್ವಾಸ ಬೇಕಾಗುತ್ತದೆ. ಕೆಲವೊಮ್ಮೆ ಆತ್ಮಾಭಿಮಾನವನ್ನೂ ಒತ್ತೆಯಿಡಬೇಕಾಗುತ್ತದೆ. ಆರೆಸ್ಸೆಸ್ ಅದಕ್ಕಾಗಿ ಅವರನ್ನು ಭಾರತರತ್ನಕ್ಕೆ ಶಿಫಾರಸು ಮಾಡಿದ್ದರೆ ಅದರಲ್ಲಿ ಅಚ್ಚರಿಪಡುವಂತಹದೇನೂ ಇಲ್ಲ.

ಈ ಬಾರಿ ಭಾರತ ರತ್ನ ಪಡೆದ ಇನ್ನೊಬ್ಬ ಹಿರಿಯರು ನಾನಾಜಿ ದೇಶಮುಖ್. ಒಂದು ಕಾಲದಲ್ಲಿ ಬಿಜೆಪಿಯ ಸಂಸದರಾಗಿದ್ದವರು. ಅವರೂ ಆರೆಸ್ಸೆಸ್‌ನ ಹಿರಿಯ ಚಿಂತಕರು. ಆದಿವಾಸಿಗಳ ಸೇವೆ ಮಾಡಿದ ಹಿರಿಮೆ ಇವರದು ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಆರೆಸ್ಸೆಸ್ ಚಿಂತನೆಯನ್ನು ಆದಿವಾಸಿಗಳ ಎಡೆಗೆ ಒಯ್ದು ಅವರನ್ನು ವೈದಿಕೀಕರಣಗೊಳಿಸಿದ ಹೆಗ್ಗಳಿಕೆಯೇ ನಾನಾಜಿ ದೇಶ್ ಮುಖ್ ಅವರ ಸಾಧನೆ. ಸದಾ ಸಿಖ್ ಹತ್ಯಾಕಾಂಡದ ಕುರಿತಂತೆ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಾ ಬರುತ್ತಿದೆ. ಸಿಖ್ ಹತ್ಯಾಕಾಂಡದ ಹಿಂದೆ ಕಾಂಗ್ರೆಸ್ ಸರಕಾರವಿತ್ತು ಎಂದೂ ಆರೋಪಿಸುತ್ತಾ ಬಂದಿದೆ. ಆದರೆ ನಾನಾಜಿ ದೇಶಮುಖ್ ಸಿಖ್ ಹತ್ಯಾಕಾಂಡವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಅದೊಂದು ಸಹಜ ಪ್ರತಿಕ್ರಿಯೆಯಾಗಿದೆ ಎಂದು ಮಾಧ್ಯಮಗಳಲ್ಲಿ ಬರೆದಿದ್ದರು. ಹೀಗಿದ್ದರೂ ಅವರು ‘ಭಾರತ ರತ್ನ’ ಎನ್ನಿಸಿಕೊಂಡಿದ್ದಾರೆ. ಭೂಪೇನ್ ಹಝಾರಿಕಾ ಅವರು ಖ್ಯಾತ ಗಾಯಕರೇನೋ ಹೌದು. ಆದರೆ ಅವರು ಕೂಡ ಬಿಜೆಪಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರು. ಅವರಿಗೂ ಬಿಜೆಪಿಯ ಹಿನ್ನೆಲೆಯಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಿಕ್ಕಿರುವ ಗೌರವವನ್ನೂ ಜನರು ಅನುಮಾನದಿಂದ ನೋಡುವಂತಾಗಿದೆ. ಬಹುಶಃ ಬೇರೆ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲವೇನೋ. ಈ ಮೂವರಿಗೆ ಹೋಲಿಸಿದರೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ಪಡೆಯಲು ಸರ್ವ ಅರ್ಹತೆಯಿತ್ತು. ಕೆಲವು ಸಾವಿರ ರನ್ನುಗಳನ್ನು ಪಡೆದ ಸಚಿನ್ ದೇಶದ ಭಾರತ ರತ್ನ ಎನಿಸಿಕೊಳ್ಳುತ್ತಾರೆ.

ಲಕ್ಷಾಂತರ ವಿದ್ಯಾರ್ಥಿಗಳಿಗೆ ಊಟ, ವಸತಿ, ವಿದ್ಯೆಯನ್ನು ನೀಡಿದ ಸಿದ್ದಗಂಗಾ ಸ್ವಾಮೀಜಿಗೆ ಮಾತ್ರ ಅರ್ಹತೆಯಿಲ್ಲ ಎಂದು ಸರಕಾರ ಭಾವಿಸುತ್ತದೆ. ಒಂದು ರೀತಿಯಲ್ಲಿ ಭಾರತ ರತ್ನವನ್ನು ಪಡೆಯದೇ ಇದ್ದುದರಿಂದ ಸಿದ್ದಗಂಗಾ ಸ್ವಾಮೀಜಿಗಳು ಏನನ್ನೂ ಕಳೆದುಕೊಳ್ಳಲಿಲ್ಲ. ಒಂದು ವೇಳೆ ಆ ಗೌರವವನ್ನು ಅವರಿಗೆ ನೀಡಿದ್ದಿದ್ದರೆ ‘ಭಾರತ ರತ್ನ’ ಪ್ರಶಸ್ತಿಯ ಹಿರಿಮೆ ಹೆಚ್ಚಾಗುತ್ತಿತ್ತು. ಇನ್ನೊಂದು ರೀತಿಯಲ್ಲೂ ಭಾರತ ರತ್ನ ಪ್ರಶಸ್ತಿ ಸಿದ್ದಗಂಗಾ ಸ್ವಾಮೀಜಿಗೆ ಸಿಗದೇ ಇರುವುದು ಒಳಿತೇ ಆಯಿತು. ಇಲ್ಲವಾದರೆ ನಾವು ಸಚಿನ್ ತೆಂಡುಲ್ಕರ್, ನಾನಾಜಿ ದೇಶ್‌ಮುಖ್ ಸಾಲಿನಲ್ಲಿ ಇರಿಸಿ ಸ್ವಾಮೀಜಿಯನ್ನು ನೋಡಬೇಕಾಗಿತ್ತು.

ಒಂದು ಕಾಲದಲ್ಲಿ ಭಾರತರತ್ನ ಸಿಕ್ಕಿತು ಎನ್ನುವಾಗ ಅವರ ಕುರಿತಂತೆ ದೇಶ ಗೌರವದಿಂದ ನೋಡುತ್ತಿತ್ತು. ಇಂದು ಆ ಪ್ರಶಸ್ತಿ ವಿಜೇತರ ಕುರಿತಂತೆ ಏನೂ ಅನ್ನಿಸುತ್ತಿಲ್ಲ. ಭಾರತ ರತ್ನ ತನ್ನ ಹಿರಿಮೆಯನ್ನು ಮರಳಿ ಗಳಿಸಿಕೊಳ್ಳಬೇಕಾದರೆ, ಅರ್ಹರ ಆಯ್ಕೆಯ ಹಿಂದೆ ರಾಜಕೀಯ ಶಕ್ತಿಗಳು ಇರಬಾರದು. ಆ ಪ್ರಶಸ್ತಿಯನ್ನು ಸರಕಾರ ನಿಯಂತ್ರಿಸಬಾರದು. ಬದಲಿಗೆ ಈ ದೇಶದ ಅತ್ಯಂತ ಹಿರಿಯ ತಜ್ಞರು, ಸಾಧಕರು, ಚಿಂತಕರನ್ನೊಳಗೊಂಡ ತಂಡವೊಂದು ಸ್ವತಂತ್ರವಾಗಿ ಭಾರತ ರತ್ನರನ್ನು ಆಯ್ಕೆ ಮಾಡುವಂತಾಗಬೇಕು. ಆದರೆ ಇಂದು ಸಿಬಿಐಯಂತಹ ಸಂಸ್ಥೆಯನ್ನೇ ತನ್ನ ಹಸ್ತಕ್ಷೇಪದ ಮೂಲಕ ಅಸ್ತವ್ಯಸ್ತಗೊಳಿಸುವ ಸರಕಾರದಿಂದ, ಇಂತಹದೊಂದು ಕ್ರಮವನ್ನು ನಿರೀಕ್ಷಿಸುವುದು ದುಬಾರಿಯಾದೀತೇನೋ? ಅದೇನೇ ಇರಲಿ, ಲಿಂಗಾಯತ ಧರ್ಮ ಸ್ವತಂತ್ರವಾಗದಂತೆ ನೋಡಿಕೊಂಡ ಕೇಂದ್ರ ಸರಕಾರ, ಇದೀಗ ಕರ್ನಾಟಕದ ಒಬ್ಬ ಮಹಾಶರಣನನ್ನು ಅವಮಾನಿಸಿದೆ. ಇದು ಸಕಲ ಕನ್ನಡಿಗರಿಗೆ ಆದ ಅವಮಾನ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News