×
Ad

ಕಾಂಗ್ರೆಸ್ ಮುಖಂಡರನ್ನು ಹದ್ದುಬಸ್ತಿನಲ್ಲಿಡಲು ಕುಮಾರಸ್ವಾಮಿ ಬ್ಲಾಕ್‌ಮೇಲ್: ಬಿಎಸ್‌ವೈ

Update: 2019-01-28 20:18 IST

ಬೆಂಗಳೂರು, ಜ. 28: ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ಒಂದು ಕಡೆಯಿಂದ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಮತ್ತೊಂದು ಕಡೆ ರಾಜ್ಯದ ಕಾಂಗ್ರೆಸ್ ನಾಯಕರನ್ನು ರಾಹುಲ್ ಗಾಂಧಿ ಮೂಲಕ ಹದ್ದು ಬಸ್ತಿನಲ್ಲಿಡಲು ಸಿಎಂ ಯತ್ನಿಸುತ್ತಿರುವುದು ಒಂದು ಬ್ಲಾಕ್‌ಮೇಲ್ ತಂತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿಶ್ಲೇಷಿಸಿದ್ದಾರೆ.

ಸಿಎಂ ರಾಜೀನಾಮೆ ಹೇಳಿಕೆ ಮೈತ್ರಿ ಸರಕಾರದ ಎರಡೂ ಪಕ್ಷಗಳಲ್ಲಿರುವ ಒಳ ಜಗಳವನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್-ಜೆಡಿಎಸ್ ನಡುವಿನ ಭಿನ್ನಾಭಿಪ್ರಾಯ ಸಿಎಂ ಹೇಳಿಕೆಗೆ ಪುಷ್ಟಿ ನೀಡುತ್ತದೆ. ಸಿಎಂ ಮತ್ತು ಕಾಂಗ್ರೆಸ್ ನಾಯಕರು ನಮ್ಮ ಮೇಲೆ ಗೂಬೆ ಕೂರಿಸಲು ‘ಆಪರೇಷನ್ ಕಮಲ’ ಹೇಳಿಕೆ ನೀಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಅಲ್ಲದೆ, ಸರಕಾರದ ವೈಫಲ್ಯ ಮುಚ್ಚಿಕೊಳ್ಳಲು ದೊಡ್ಡ ತಂತ್ರ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಆವರಿಸಿದ್ದರೂ, ಮೈತ್ರಿ ಸರಕಾರ ಗಾಢ ನಿದ್ದೆಯಲ್ಲಿದೆ. ಹೀಗಾಗಿ ಜನರ ನೋವು ಇವರ ಗಮನಕ್ಕೆ ಬರುತ್ತಿಲ್ಲ. ಚಿತ್ರದುರ್ಗದ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ರೈತರ ಆತ್ಮಹತ್ಯೆಗೆ ಶರಣಾಗಿ ಒಂದು ತಿಂಗಳು ಕಳೆದರೂ ಯಾರೊಬ್ಬರೂ ರೈತನ ಮನೆಗೆ ಭೇಟಿ ನೀಡಿಲ್ಲ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News