'ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂಬ ಹೇಳಿಕೆ: ಬಸವರಾಜ ಹೊರಟ್ಟಿ ತಿರುಗೇಟು

Update: 2019-01-28 17:00 GMT

ಹುಬ್ಬಳ್ಳಿ, ಜ.28: ಕೆಲವು ಸಚಿವರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿ ಪದೇ ಪದೇ ಮಾತನಾಡುವದರಿಂದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಕುಳಿತು ಮಾತನಾಡಿಸುತ್ತಿದ್ದಾರೆಂಬ ಭಾವನೆ ರಾಜ್ಯದ ಜನರಲ್ಲಿ ಮೂಡುತ್ತದೆ. ವಿನಾಕಾರಣ ಅವರು ಹೆಸರು ಹಾಳಾಗುತ್ತದೆ. ಮೈತ್ರಿ ಧರ್ಮದ ಪಾಲನೆ ಮಾಡುವುದು ಎರಡೂ ಪಕ್ಷದ ಕರ್ತವ್ಯ. ಈ ರೀತಿ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಒಂದು ಕಡೆ ಆಪರೇಷನ್ ಕಮಲ, ಇನ್ನೊಂದು ಕಡೆ ಈ ರೀತಿಯ ಹೇಳಿಕೆಯಿಂದ ಸಿಎಂ ಹೇಗೆ ಕೆಲಸ ಮಾಡಬೇಕು. ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸರಿಯಾದ ವಾತಾವರಣ ಇಲ್ಲ. ಈಗ ಬಜೆಟ್ ಮಂಡನೆ ಮಾಡಲು ಹೊರಟಿದ್ದಾರೆ, ಇವರಿಗೆ ಮೈಂಡ್ ಫ್ರೀ ಇರಬೇಕು. ಇಂತಹ ಒತ್ತಡಗಳಲ್ಲಿ ಅವರು ಹೇಗೆ ಕೆಲಸ ಮಾಡಲು ಆಗುತ್ತದೆ. ಈ ಹಿಂದೆ ನನ್ನಲ್ಲಿ ಕಾಂಗ್ರೆಸ್ ವಿರುದ್ಧ ಮಾತನಾಡಬೇಡ ಎಂದಿದ್ದಕ್ಕೆ ನಾನು ಸುಮ್ಮನೆ ಇದ್ದೆ. ಈಗ ಇವರು ಏನು ಮಾಡುತ್ತಿದ್ದಾರೆ ಎಂದರು.

ಸಮನ್ವಯ ಸಮಿತಿ ಇದ್ದೂ ಇಲ್ಲದಂತಾಗಿದೆ. ಸಮನ್ವಯ ಸಮಿತಿಯಲ್ಲಿ ಏನು ತೀರ್ಮಾನ ಆಗುತ್ತೆ ಎಂಬುದು ಗೊತ್ತಾಗುತ್ತಿಲ್ಲ. ಸಮನ್ವಯ ಸಮಿತಿಯಲ್ಲಿ ಕೇವಲ ನಾಲ್ಕು ಜನ ಇದ್ದಾರೆ. ಅದರಲ್ಲಿ ಏಳೆಂಟು ಜನ ಆದ್ರೂ ಇರಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News