ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ: ಜಗದೀಶ್ ಶೆಟ್ಟರ್

Update: 2019-01-28 17:02 GMT

ಹುಬ್ಬಳ್ಳಿ, ಜ.28: ಕಾಂಗ್ರೆಸ್ ನವರಿಗೆ ಸಿಎಂ ಮೇಲೆ ವಿಶ್ವಾಸವಿಲ್ಲ. ಮನೆಬಾಗಿಲಿಗೆ ಬಂದು ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಈಗ ಉಲ್ಟಾ ಹೊಡೆದಿದೆ. ಮೈತ್ರಿ ಸರ್ಕಾರದ ವೈಫಲ್ಯ ಮರೆಮಾಚಲು ಬಿಜೆಪಿಯನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತ ಸಿದ್ದರಾಮಯ್ಯ ಅವರನ್ನ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಸಚಿವರಿಗೆ ನಾಚಿಕೆಯಾಗಬೇಕು. ಚುನಾವಣೆಗೆ ಇನ್ನು ನಾಲ್ಕು ವರ್ಷ ಇರುವಾಗ ಮುಂದಿನ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿಯನ್ನು ಬದಲಿಸಿ ಸಿದ್ದರಾಮಯ್ಯನನ್ನು ಮುಖ್ಯಮಂತ್ರಿ ಮಾಡಲು ಹೋರಟಿದ್ದೀರೋ ಹೇಗೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕರ ನಿಯಂತ್ರಿಸದಿದ್ದರೆ ರಾಜೀನಾಮೆ ನೀಡುವದಾಗಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ರಾಜೀನಾಮೆ ಕೊಡುವುದಾದ್ರೆ ಕೊಟ್ಟು ಮನೆಗೆ ಹೋಗಲಿ. ಪರಸ್ಪರ ವಿಶ್ವಾಸ ಇಲ್ಲದ ಸರ್ಕಾರ ಬಹಳ ದಿನ ಇರಬಾರದು. ಕಾಂಗ್ರೆಸ್- ಜೆಡಿಎಸ್ ಜಗಳದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆಡಳಿತ ನಡೆಸಲು ಆಗದಿದ್ದರೆ ಸಿಎಂ ರಾಜೀನಾಮೆ ನೀಡಲಿ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಾಗಿನಿಂದ ಅಸ್ಥಿರತೆ ನಿರ್ಮಾಣವಾಗಿದೆ. ಕಾಂಗ್ರೆಸ್ ಜೆಡಿಎಸ್ ಪರಸ್ಪರ ಹೈಡ್ರಾಮ ಮಾಡುತ್ತಿವೆ. ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಈ ತರಹದ ಡ್ರಾಮಾ ಕೈಗೆತ್ತಿಕೊಂಡಿದೆ ಎಂದರು. 

ಕುಮಾರಸ್ವಾಮಿಯವರೇ, ಕಿರಿಕಿರಿ ಜಾಸ್ತಿಯಾದ್ರೆ ಕಾಂಗ್ರೆಸ್ ಬೆಂಬಲ ಹಿಂಪಡೆಯಿರಿ ಎಂದು ಸಲಹೆ ನೀಡಿದ ಶೆಟ್ಟರ್, ಜನತೆಯನ್ನು ಮುರ್ಖರನ್ನಾಗಿ ಮಾಡುವುದು ಜೆಡಿಎಸ್- ಕಾಂಗ್ರೆಸ್ ನಿಲ್ಲಿಸಲಿ. ರಾಜ್ಯದ ಜನತೆ ಇಬ್ಬರಿಗೂ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News