ವಕೀಲರ ಕಲ್ಯಾಣ ನಿಧಿ ಮೊತ್ತ 30 ಲಕ್ಷಕ್ಕೆ ಏರಿಸಲು ಮನವಿ
ಬೆಂಗಳೂರು, ಜ.28: ನಿಧನ ಹೊಂದಿದ ವಕೀಲರ ಕುಟುಂಬಕ್ಕೆ ಕರ್ನಾಟಕ ವಕೀಲರ ಪರಿಷತ್ತಿನಿಂದ ನೀಡುವ ಕಲ್ಯಾಣ ನಿಧಿ ಮೊತ್ತವನ್ನು 8 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಬೇಕೆಂದು ಬೆಂಗಳೂರು ವಕೀಲರ ಸಂಘ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಹಾಗೂ ಇತರೆ ಪದಾಧಿಕಾರಿಗಳು ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಪ್ರಸ್ತುತ ನಿಧನ ಹೊಂದಿದ ವಕೀಲರ ಕುಟುಂಬಕ್ಕೆ ಕರ್ನಾಟಕ ವಕೀಲರ ಪರಿಷತ್‌ನಿಂದ 8 ಲಕ್ಷ ರೂ.ಕಲ್ಯಾಣ ನಿಧಿ ನೀಡಲಾಗುತ್ತಿದ್ದು, ಆ ಮೊತ್ತವನ್ನು 30 ಲಕ್ಷ ರೂ.ಗೆ ಹೆಚ್ಚಿಸಬೇಕು. ಕಾನೂನು ಪುಸ್ತಕಗಳು ಖರೀದಿಸಲು ಹಾಗೂ ಇತರೆ ವೆಚ್ಚಗಳಿಗಾಗಿ ಜಿಲ್ಲಾ ವಕೀಲರ ಸಂಘಕ್ಕೆ ವಾರ್ಷಿಕ 10 ಲಕ್ಷ ರೂ.ತಾಲೂಕು ವಕೀಲರ ಸಂಘಕ್ಕೆ 5 ಲಕ್ಷ ರೂ., ಧಾರವಾಡ, ಕಲಬುರಗಿ ಹೈಕೋರ್ಟ್ ವಕೀಲರ ಸಂಘಕ್ಕೆ 50 ಲಕ್ಷ ರೂ.ಮತ್ತು ಬೆಂಗಳೂರು ವಕೀಲರ ಸಂಘಕ್ಕೆ ಒಂದು ಕೋಟಿ ರೂ.ಅನುದಾನ ನೀಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಅಲ್ಲದೆ, ಯುವ ವಕೀಲರಿಗೆ ಮಾಸಿಕ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಎರಡು ಸಾವಿರದಿಂದ ಐದು ಸಾವಿರಕ್ಕೆ ಹೆಚ್ಚಿಸಿ ಐದು ವರ್ಷಗಳ ಅವಧಿಗೆ ನೀಡಬೇಕು ಹಾಗೂ ಆದಾಯ ಮಿತಿಯನ್ನು 40 ಸಾವಿರ ರೂ.ನಿಂದ ನಾಲ್ಕು ಲಕ್ಷ ರೂ.ಗೆ ಹೆಚ್ಚಿಸಬೇಕು. ವೃತ್ತಿ ನಿರತ ವಕೀಲರಿಗೆ ಆರೋಗ್ಯ ವಿಮೆ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಉಪಸ್ಥಿತರಿದ್ದರು.