ವ್ಯಕ್ತಿಯನ್ನು ಹೊತ್ತೊಯ್ದು ಕೊಂದು ಹಾಕಿದ ಹುಲಿ
Update: 2019-01-28 23:11 IST
ಮೈಸೂರು,ಜ.28: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೇ ರೇಂಜ್ ವ್ಯಾಪ್ತಿಯ ಡಿ.ಬಿ.ಕುಪ್ಪೆ ಬಳಿ ಹುಲಿಯೊಂದು ವ್ಯಕ್ತಿಯೊಬ್ಬನನ್ನು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಗುಂಡುಜಮೇಟ್ಲು ಗ್ರಾಮದ ನಿವಾಸಿ ಚಿನ್ನಪ್ಪ (40) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಚಿನ್ನಪ್ಪ ಮನೆಯಿಂದ ಹೊರ ಬರುತ್ತಿದ್ದಂತೆ ಹುಲಿ ಅವರ ಮೇಲೆ ಎರಗಿ ಹೊತ್ತೊಯ್ದಿದೆ. ಇದನ್ನು ಕಂಡು ಗ್ರಾಮಸ್ಥರು ಹುಲಿಯನ್ನು ಹಿಂಬಾಲಿಸಿದ್ದಾರೆ. ಗ್ರಾಮಸ್ಥರ ಚೀರಾಟಕ್ಕೆ ಹೆದರಿದ ಹುಲಿ ಮೃತ ದೇಹವನ್ನು ಅಲ್ಲೆ ಬಿಟ್ಟು ಹೋಗಿದೆ.
ಘಟನೆ ಕಂಡು ಕಂಗಾಲಾದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಿಡಿ ಶಾಪಹಾಕಿದ ಘಟನೆ ನಡೆಯಿತು. ಮೃತ ವ್ಯಕ್ತಿಯ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.