ರಾಹುಲ್ ಗಾಂಧಿಯ ಸರಳತೆ, ವಿನಮ್ರತೆಯನ್ನು ಶ್ಲಾಘಿಸಲೇಬೇಕು: ಬಿಜೆಪಿ ಮುಖಂಡರಿಂದ ಗುಣಗಾನ

Update: 2019-01-30 08:55 GMT
ಮೈಕೆಲ್ ಲೋಬೊ

ಹೊಸದಿಲ್ಲಿ, ಜ.30: ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿಯವರನ್ನು ಗೋವಾ ಬಿಜೆಪಿ ಮುಖಂಡರು ಶ್ಲಾಘಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರನ್ನು ಭೇಟಿ ಮಾಡಿದ ರಾಹುಲ್ ಕ್ರಮವನ್ನು ವಿಧಾನಸಭೆ ಸ್ಪೀಕರ್ ಹಾಗೂ ಬಿಜೆಪಿ ಶಾಸಕ ಮೈಕೆಲ್ ಲೋಬೊ ಸ್ವಾಗತಿಸಿದ್ದಾರೆ.

"ಅನಾರೋಗ್ಯದಿಂದ ಬಳಲುತ್ತಿರುವ ಮುಖ್ಯಮಂತ್ರಿ ಪಾರಿಕ್ಕರ್ ಅವರಿಗೆ ಶುಭ ಹಾರೈಸುವ ಸಲುವಾಗಿ ರಾಹುಲ್ ಗಾಂಧಿ ಗೋವಾಗೆ ವಿಶೇಷ ಭೇಟಿ ನೀಡಿದ್ದಾರೆ. ಅವರ ಸರಳತೆ, ವಿನಮ್ರತೆಯನ್ನು ಎಲ್ಲ ಭಾರತೀಯರು ಮತ್ತು ಗೋವನ್ನರು ಹೊಗಳಲೇಬೇಕು. ಆತ ಅತ್ಯಂತ ಸರಳ ವ್ಯಕ್ತಿ; ಅವರಂತಹ ನಾಯಕರು ಗೋವಾ ಹಾಗೂ ಭಾರತಕ್ಕೆ ಬೇಕು" ಎಂದು ಲೋಬೊ ಬಣ್ಣಿಸಿದ್ದಾರೆ.

ಕ್ಯಾನ್ಸರ್‍ ಗಾಗಿ ಚಿಕಿತ್ಸೆ ಪಡೆಯುತ್ತಿರುವ ಪಾರಿಕ್ಕರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿದ ರಾಹುಲ್, "ಇಂದು ಮುಂಜಾನೆ ನಾನು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದೇನೆ. ಇದು ವೈಯಕ್ತಿಕ ಭೇಟಿ" ಎಂದು ಸ್ಪಷ್ಟಪಡಿಸಿದ್ದರು.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಪಾರಿಕ್ಕರ್ ಅವರ ವಶದಲ್ಲಿದೆ ಎಂದು ಗೋವಾ ಸಚಿವರೊಬ್ಬರು ನೀಡಿದ ಹೇಳಿಕೆಯ ಧ್ವನಿಮುದ್ರಣ ಎನ್ನಲಾದ ಆಡಿಯೊ ಬಗ್ಗೆ ರಾಹುಲ್ ಉಲ್ಲೇಖಿಸಿದ ಮರುದಿನವೇ ಗೋವಾದಲ್ಲಿ ಖಾಸಗಿಯಾಗಿ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

ಆರಂಭದಲ್ಲಿ ಪರಿಕ್ಕರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲು ರಾಹುಲ್ ಉದ್ದೇಶಿಸಿದ್ದರು. ಆದರೆ ಅವರು ಆಗಮಿಸುವ ವೇಳೆಗೆ ಮುಖ್ಯಮಂತ್ರಿ ಸದನಕ್ಕೆ ತೆರಳಿದ ಹಿನ್ನೆಲೆಯಲ್ಲಿ, ಕಚೇರಿಯಲ್ಲೇ ರಾಹುಲ್, ಪಾರಿಕ್ಕರ್ ಅವರನ್ನು ಭೇಟಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News