ರೈತರಿಗಾಗಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜ.30: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಂದ ಕುಟುಂಬ ನಮ್ಮದು. ಇಂತಿರುವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡಿರುವುದಿಲ್ಲ. ಕೇವಲ ರೈತರಿಗಾಗಿ ಮಾತ್ರ ಈ ಸ್ಥಾನದಲ್ಲಿದ್ದೇನೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಬುಧವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ನನ್ನ ಕಾರ್ಯವೈಖರಿ ಬಗ್ಗೆ ಕೆಲವು ಮಂದಿ ಕಾಂಗ್ರೆಸ್ ಶಾಸಕರ ಅಸಂಬದ್ಧ ಹೇಳಿಕೆಯ ನಡುವೆಯೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದಿದ್ದೇನೆಂದರೆ ಅದು ಜನರಿಗಾಗಿ ಮಾತ್ರವೆಂದು ಭಾವುಕರಾದರು.
ಮೈತ್ರಿ ಸರಕಾರದ ಬಗ್ಗೆ ಕಾಂಗ್ರೆಸ್ ಶಾಸಕರು ಹಾದಿ ಬೀದಿಯಲ್ಲಿ ಮಾತುನಾಡುತ್ತಿದ್ದಾರೆ. ಇದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವೆಂದು ಹೇಳಿದ್ದೆ. ಇದು ಹೀಗೆಯೆ ಮುಂದುವರೆದರೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಗಮನಕ್ಕೆ ತರಲಿದ್ದೇನೆಂದು ಅವರು ತಿಳಿಸಿದರು.
ನಾನು ಸೂಕ್ಷ್ಮ ವ್ಯಕ್ತಿ. ಮುಖ್ಯಮಂತ್ರಿ ಆದ ಬಳಿಕ ಪಕ್ಷದ ಕಚೇರಿಯಲ್ಲಿ ಮೊದಲ ದಿನ ಮಾತನಾಡುವಾಗ ಕಣ್ಣೀರು ಹಾಕಿದೆ. ಇವತ್ತಿಗೂ ನನ್ನ ಮನಸ್ಸಿನಲ್ಲಿ ನೋವಿದೆ. ಆ ನೋವನ್ನು ಸಹಿಸಿಕೊಂಡು ನಾಡಿನ ಜನರಿಗೆ ಒಳ್ಳೆಯದನ್ನು ಮಾಡಲು ಪ್ರಯತ್ನಪಡುತ್ತಿದ್ದೇನೆ ಎಂದು ಅವರು ಹೇಳಿದರು
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಕನಿಷ್ಠ 10 ಸ್ಥಾನ ಕೊಟ್ಟರೆ, ಈ ರಾಜ್ಯವನ್ನು ಅಭಿವೃದ್ದಿಯಲ್ಲಿ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ. ಕೇಂದ್ರ ಸರಕಾರ ಬದಲಾದರೆ, ದೇವೇಗೌಡರ ನೇತೃತ್ವದಲ್ಲಿ ಹೆಚ್ಚಿನ ನೆರವು ರಾಜ್ಯಕ್ಕೆ ಬರಲಿದೆ. ಆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾಂದಿ ಆಗಲಿದೆ ಎಂದು ಅವರು ಹೇಳಿದರು.
ಜೆಡಿಎಸ್‌ನಲ್ಲೂ ನಿಗಮ ಮಂಡಳಿ ನೇಮಕ: ಮಿತ್ರ ಪಕ್ಷದವರು ನನ್ನ ಮೇಲೆ ಒತ್ತಡ ತಂದು ನಿಗಮ ಮಂಡಳಿ ನೇಮಕ ಮಾಡಿಸಿಕೊಂಡಿದ್ದಾರೆ. ಜೆಡಿಎಸ್‌ನಲ್ಲೂ ನೇಮಕ ಆಗಬೇಕಿದ್ದು, ಸದ್ಯದಲ್ಲೇ ಮಾಡುತ್ತೇವೆ. ನಿಗಮ ಮಂಡಳಿ ನೇಮಕ ಮಾಡದೆ ಹಣ ಉಳಿಸಬೇಕೆಂದುಕೊಂಡಿದ್ದೆ. ಆದರೆ, ಈಗ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಮಾಜಿ ಸಚಿವ ವೈ.ಎಸ್.ವಿ.ದತ್ತ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಮತ್ತಿತರರಿದ್ದರು.
ರೈತರ ಸಾಲಮನ್ನಾದ ಬಗ್ಗೆ ಅನುಮಾನ ಬೇಡ
ಈಗಾಗಲೆ 2.5 ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾ ಆದೇಶ ಹೋಗಿದೆ. ಸಿದ್ದರಾಮಯ್ಯ ಮಾಡಿದ ಸಾಲಮನ್ನಾ ಹಣ ಬಾಕಿ ಇತ್ತು. 3 ಸಾವಿರದ 8 ನೂರು ಕೋಟಿ ರೂ. ಹಣ ಮನ್ನಾ ಮಾಡಿದ್ದೇನೆ. ಫೆ.8 ರಂದು ಬಜೆಟ್ನಲ್ಲಿ 44 ಲಕ್ಷ ರೈತರ ಸಾಲಮನ್ನಾ ಆಗುತ್ತೆ. ಸಾಲಮನ್ನಾದ ವಿವರವನ್ನು ಪ್ರತಿ ರೈತನ ಮನೆಗೆ ತಲುಪಿಸುತ್ತೇನೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ