ಗೋಣಿಬೀಡು ಪೊಲೀಸ್ ಠಾಣೆಯ ಆವರಣದಲ್ಲಿ ದೇವಸ್ಥಾನ ಉದ್ಘಾಟನೆ: ಪೊಲೀಸರ ಮೌಢ್ಯಕ್ಕೆ ಸಾರ್ವಜನಿಕರ ಆಕ್ರೋಶ

Update: 2019-01-30 17:29 GMT

ಮೂಡಿಗೆರೆ, ಜ.30: ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಗಣಪತಿ ದೇವಸ್ಥಾನವನ್ನು ನಾಲ್ವರು ಅರ್ಚಕರು ಸೇರಿ ವಿವಿಧ ರೀತಿಯ ಪೂಜಾ ವಿಧಿ ವಿಧಾನದ ಮೂಲಕ ಬುಧವಾರ ಉದ್ಘಾಟಿಸಲಾಗಿದ್ದು, ಠಾಣಾ ಆವರಣದಲ್ಲಿ ದೇಗುಲ ನಿರ್ಮಿಸಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ.

ತಾಲೂಕಿನ ಗೋಣಿಬೀಡು ಗ್ರಾಮದಲ್ಲಿನ ಪೊಲೀಸ್ ಠಾಣೆಯನ್ನು ಪ್ರಾರಂಭದಲ್ಲಿ ಪಟ್ಟಣದ ಗ್ರಾಪಂ ಕಚೇರಿ ಕಟ್ಟಡದಲ್ಲಿ ಪ್ರಾರಂಭಿಸಲಾಗಿತ್ತು. ಬಳಿಕ ಇಲಾಖೆಗೆ ಸ್ವಂತ ಕಟ್ಟಡ ಮಂಜೂರಾದಾಗ ಕಟ್ಟಡ ನಿರ್ಮಾಣಕ್ಕೆ ಜಾಗದ ತಕರಾರು ಎದುರಾಗಿತ್ತು. ಆ ವೇಳೆ ಸಂತೆ ಮೈದಾನದಲ್ಲಿ ಜಾಗ ನೀಡಿ, ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿತ್ತು. ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಿಸಿದ ಬಳಿಕ ಗ್ರಾಮದಲ್ಲಿ ಹಲವಾರು ತೊಂದರೆಗಳು ಎದುರಾದವು. ಮಳೆಯಾಗದೆ ಕುಡಿಯುವ ನೀರಿಗೂ ಬರ ಬಂದಿದ್ದವು. ಠಾಣೆಯಲ್ಲಿ ಪೊಲೀಸರಿಗೂ ಹಲವು ರೀತಿಯ ತೊಂದರೆ ಎದುರಾಗಿದ್ದವು ಎನ್ನಲಾಗುತ್ತಿದೆ.

ಈ ಕಾರಣಕ್ಕೆ ಕೇರಳದ ತಂತ್ರಿಯೊಬ್ಬರನ್ನು ಸಂಪರ್ಕಿಸಿದಾಗ ಠಾಣಾ ಕಟ್ಟಡ ನಿರ್ಮಿಸಿದ ಜಾಗದಲ್ಲಿ ಹಿಂದೆ ಗುಡಿಯೊಂದಿತ್ತು. ಆ ಜಾಗದಲ್ಲಿ ಠಾಣೆ ಕಟ್ಟಡ ನಿರ್ಮಿಸಲಾಗಿದೆ. ಹಾಗಾಗಿ ಗ್ರಾಮಕ್ಕೂ ಹಾಗೂ ಪೊಲೀಸರಿಗೂ ತೊಂದರೆ ಎದುರಾಗಿದೆ. ಗುಡಿಯಲ್ಲಿದ್ದ ವಿಗ್ರಹವನ್ನು ಹೊಳೆಗೆ ಎಸೆಯಲಾಗಿದೆ. ಈ ತೊಂದರೆ ನಿವಾರಣೆಯಾಗಬೇಕಾದರೆ ಈಗ ಪೊಲೀಸ್ ಠಾಣೆ ಇರುವ ಕಟ್ಟಡದ ಆವರಣದಲ್ಲಿ ಗಣಪತಿ ದೇವಸ್ಥಾನ ನಿರ್ಮಿಸಿ ವಿಗ್ರಹವಿಟ್ಟು ದಿನನಿತ್ಯ ಪೂಜೆ ನಡೆಸಬೇಕು ಎಂದು ತಂತ್ರಿ ತಿಳಿಸಿದ್ದರಿಂದ ಗ್ರಾಮದ ವಿವಿಧ ಮುಖಂಡರು ರಾಜಕಾರಣಿಗಳು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಇಲಾಖೆಯ ಅನುಮತಿ ಮೇರೆಗೆ ಠಾಣಾ ಆವರಣದಲ್ಲಿ ದೇಗುಲ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ.

ದೇಗುಲ ಉದ್ಘಾಟನೆ ಮಾಡಿರುವುದು ತಾಲೂಕು ವ್ಯಾಪ್ತಿಯ ಸಾರ್ವಜನಿಕರು ಹಾಗೂ ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದೆ. ಮೌಢ್ಯದ ವಿರುದ್ಧ ಜನ ಜಾಗೃತಿ ಮೂಡಿಸಬೇಕಾಗಿರುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಆದರೆ ಗೋಣಿಬೀಡು ಪೊಲೀಸರು ಠಾಣಾ ಆವರಣದಲ್ಲಿ ದೇಗುಲ ನಿರ್ಮಿಸಿರುವುದು ಜಿಲ್ಲಾ ಪೊಲೀಸ್ ಇಲಾಖೆಯ ಮೌಢ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಗೋಣಿಬೀಡು ಠಾಣಾ ಆವರಣದಲ್ಲಿ ನಿರ್ಮಿಸಲಾದ ದೇಗುಲ ಉದ್ಘಾಟನೆ ವೇಳೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ತಂಡೋಪ ತಂಡವಾಗಿ ಪಾಲ್ಗೊಂಡರು. ಠಾಣಾಧಿಕಾರಿ ರಾಕೇಶ್ ಮತ್ತು ಸಿಬ್ಬಂದಿ ಬಿಳಿ ವಸ್ತ್ರ ಧರಿಸಿ ಪಾಲ್ಗೊಂಡಿದ್ದರು. ಪೊಲೀಸ್ ಠಾಣೆಯಿಂದ ಗೋಣಿಬೀಡು ಮುಖ್ಯ ರಸ್ತೆಯ ವೃತ್ತದವರೆಗೂ ರಸ್ತೆಯನ್ನು ಸಿಂಗರಿಸಲಾಗಿತ್ತು.

ಈ ವೇಳೆ ತಾಪಂ ಅಧ್ಯಕ್ಷ ಕೆ.ಸಿ.ರತನ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕುಮಾರ್, ಜಿಪಂ ಸದಸ್ಯೆ ಅಮಿತಾ ಮುತ್ತಪ್ಪ, ಗೋಣಿ ಬೀಡು ಗ್ರಾಪಂ ಅಧ್ಯಕ್ಷೆ ಭಾರತಿ ಪ್ರಕಾಶ್, ಚಿನ್ನಿಗ ಗ್ರಾಪಂ ಅಧ್ಯಕ್ಷ ಸುನಿಲ್ ನಿಡಗೂಡು, ವೃತ್ತ ನಿರೀಕ್ಷಕ ಜಗದೀಶ್, ಪಿಎಸ್ಸೈ ರಾಕೇಶ್, ಮೂಡಿ ಗೆರೆ ಪಿಎಸ್ಸೈ ಕೆ.ಟಿ.ರಮೇಶ್, ಮುಖಂಡರಾದ ಜೆ.ಎಸ್.ರಘು, ಹಂತೂರು ಸತೀಶ್, ಜೆ.ಎಸ್.ಸುಧೀರ್, ಅರವಿಂದ, ಸುಮಾ ಸುರೇಶ್, ಕಿರುಗುಂದ ಅಬ್ಬಾಸ್, ಎ.ಸಿ.ಅಯೂಬ್ ಹಾಜಿ, ಫಿಶ್‌ಮೋಣು, ದಿನೇಶ್, ಗಂಗಮ್ಮ ಮತ್ತಿತರರಿದ್ದರು.

ಗೋಣಿಬೀಡಿನಲ್ಲಿ ಪೊಲೀಸ್ ಠಾಣೆಯನ್ನು ಪ್ರಾರಂಭದಲ್ಲಿ ಪಟ್ಟಣದ ಗ್ರಾಪಂ ಕಚೇರಿ ಕಟ್ಟಡದಲ್ಲಿ ಪ್ರಾರಂಭಿಸಲಾಗಿತ್ತು. ಬಳಿಕ ಇಲಾಖೆಗೆ ಸ್ವಂತ ಕಟ್ಟಡ ಮಂಜೂರಾದಾಗ ಕಟ್ಟಡ ನಿರ್ಮಾಣಕ್ಕೆ ಜಾಗದ ತಕರಾರು ಎದುರಾಗಿತ್ತು. ಆ ವೇಳೆ ಸಂತೆ ಮೈದಾನದಲ್ಲಿ ಜಾಗ ನೀಡಿ, ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿತ್ತು. ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಿಸಿದ ಬಳಿಕ ಗ್ರಾಮದಲ್ಲಿ ಹಲವಾರು ತೊಂದರೆಗಳು ಎದುರಾದವು. ಮಳೆಯಾಗದೆ ಕುಡಿಯುವ ನೀರಿಗೂ ಬರ ಬಂದಿದ್ದವು. ಠಾಣೆಯಲ್ಲಿ ಪೊಲೀಸರಿಗೂ ಹಲವು ರೀತಿಯ ತೊಂದರೆ ಎದುರಾಗಿತ್ತು. ಘಟನೆ ಸಂಬಂಧ ಪೊಲೀಸ್ ಇಲಾಖೆಯ ಅನುಮತಿ ಪಡೆದು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಗ್ರಾಮಸ್ಥರು ಸೇರಿ ದೇವಸ್ಥಾನ ನಿರ್ಮಿಸಲಾಗಿದೆ.
-ಶಿವೇಗೌಡ, ಜಿಪಂ ಸದಸ್ಯ

ಗೋಣಿಬೀಡು ಕೋಮುವಾದಿ ರಾಕ್ಷಸರ ಠಾಣೆ: ಶ್ರೀನಿವಾಸ್

ಗೋಣಿಬೀಡು ಪೊಲೀಸ್ ಠಾಣೆ ಕೋಮುವಾದಿ ರಾಕ್ಷಸರ ಠಾಣೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಬಂಟರಮಕ್ಕಿ ಶ್ರೀನಿವಾಸ್ ಗೋಣಿಬೀಡು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

ಪೊಲೀಸ್ ಠಾಣೆ ಕೇವಲ ಒಂದು ಧರ್ಮದ ಸೊತ್ತಲ್ಲ. ನ್ಯಾಯಬೇಡಿ ಎಲ್ಲ ಧರ್ಮೀಯರೂ ಪೊಲೀಸ್ ಠಾಣೆಯ ಮೊರೆ ಹೋಗುತ್ತಾರೆ. ಒಂದು ಧರ್ಮಕ್ಕೆ ಸೀಮಿತವಾದ ದೇವಾಲಯ ನಿರ್ಮಾಣ ಮಾಡಿ ಗೋಣಿ ಬೀಡು ಪೊಲೀಸರು ಕೋಮುವಾದಿಗಳೆಂದು ಸಾಬೀತು ಮಾಡಿದ್ದಾರೆ. ಅಲ್ಲದೆ, ಈ ಮೂಲಕ ಸಂವಿಧಾನದಡಿಯಲ್ಲಿರುವ ಕಾನೂನು ವ್ಯವಸ್ಥೆಯ ಆಶಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಠಾಣೆಯ ಆವರಣದಲ್ಲಿ ದೇವಾಲಯ ನಿರ್ಮಾಣ ಮಾಡಲು ಅನುಮತಿ ನೀಡಿದವರು ಯಾರು ಎಂಬ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಬೇಕು ಮತ್ತು ಈ ಸಂಬಂಧ ಮೇಲಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News