ದೇಶದಲ್ಲಿ ನಿರುದ್ಯೋಗ ಪ್ರಮಾಣ 2017-18ರಲ್ಲಿ 45 ವರ್ಷಗಳಲ್ಲಿಯೇ ಗರಿಷ್ಠ

Update: 2019-01-31 08:57 GMT

ಹೊಸದಿಲ್ಲಿ, ಜ.31: ದೇಶದಲ್ಲಿ 2017-18 ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲಿಯೇ ಗರಿಷ್ಠ ಶೇ.6.1ರಷ್ಟಿತ್ತು ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ನ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (ಪಿಎಲ್‌ಎಫ್‌ಎಸ್) ಮಾಹಿತಿ ತಿಳಿಸಿದೆ. 

ಈ ನಿರುದ್ಯೋಗ ಪ್ರಮಾಣದ ಅಂಕಿಅಂಶವೇ ಸೋಮವಾರ ರಾಷ್ಟ್ರೀಯ ಅಂಕಿಅಂಶಗಳ ಆಯೋಗದ ಹಂಗಾಮಿ ಅಧ್ಯಕ್ಷ ಸೇರಿದಂತೆ ಇಬ್ಬರು ತಜ್ಞ ಸದಸ್ಯರು ರಾಜೀನಾಮೆ ನೀಡಲು ಕಾರಣವಾಗಿದೆ. ಆಯೋಗದ ಅನುಮತಿಯ ಹೊರತಾಗಿಯೂ ಸರಕಾರ ಮೇಲಿನ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿಲ್ಲ.

ನಿರುದ್ಯೋಗ ಮಾಹಿತಿಯನ್ನು ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ಜುಲೈ 2017 ಹಾಗೂ ಜೂನ್ 2018ರ ನಡುವೆ ಸಂಗ್ರಹಿಸಿತ್ತಲ್ಲದೆ, ಉದ್ಯೋಗ ಪ್ರಮಾಣ ಕುರಿತಂತೆ ಪ್ರಧಾನಿಯಾಗಿ ನರೇಂದ್ರ ಮೋದಿ ನವೆಂಬರ್ 2016ರಲ್ಲಿ ಘೋಷಿಸಿದ ನೋಟು ಅಮಾನ್ಯೀಕರಣದ ನಂತರ ನಡೆಸಲಾದ ಮೊದಲ ಸಮೀಕ್ಷೆಯಾಗಿತ್ತು.

ನಿರುದ್ಯೋಗ ಪ್ರಮಾಣ ಇಷ್ಟೊಂದು ಅಧಿಕ 1972-73ರಲ್ಲಿತ್ತು. ದೇಶದ ನಿರುದ್ಯೋಗ ಪ್ರಮಾಣ 2011-12ರಲ್ಲಿ ಶೇ.2.2ಕ್ಕೆ ಇಳಿದಿತ್ತೆಂದೂ ಮಾಹಿತಿ ತಿಳಿಸಿತ್ತು. ಯುವಜನರಲ್ಲಿ ನಿರುದ್ಯೋಗ ಪ್ರಮಾಣ 2017-18ರಲ್ಲಿ ಅದಕ್ಕಿಂತ ಹಿಂದಿನ ವರ್ಷಗಳಿಗಿಂತ ಬಹಳಷ್ಟು ಹೆಚ್ಚಾಗಿತ್ತು ಎಂದೂ ವರದಿ ತಿಳಿಸಿತ್ತು.

ಗ್ರಾಮೀಣ ಯುವಕರಲ್ಲಿ (15-29 ವಯೋಮಿತಿ) 2011-12ರಲ್ಲಿ ಶೇ.5 ಇದ್ದರೆ, 2017-18ರಲ್ಲಿ ಶೇ.17.4 ಆಗಿದೆ. ಇದೇ ವಯೋಮಿತಿಯ ಗ್ರಾಮೀಣ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ 2011-12ರಲ್ಲಿ ಶೇ.4.8 ಆಗಿದ್ದರೆ, 2017-18ರಲ್ಲಿ ಶೇ.13.6 ಆಗಿತ್ತು.

ಸುಶಿಕ್ಷಿತ ಗ್ರಾಮೀಣ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ 2004-2005ರಲ್ಲಿ ಶೇ 9.7 ಆಗಿದ್ದರೆ 2011-12ರಲ್ಲಿ ಶೇ 15.2 ಆಗಿತ್ತು ಹಾಗೂ 2017-18ರಲ್ಲಿ ಶೇ 17.3ಕ್ಕೆ ಏರಿಕೆಯಾಗಿತ್ತು.
ಈ ಹಿಂದೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ನಡೆಸಿದ ಸಮೀಕ್ಷೆಯಂತೆ ಅಮಾನ್ಯೀಕರಣದ ನಂತರ, 2017ರ ಪ್ರಥಮ ನಾಲ್ಕು ತಿಂಗಳುಗಳಲ್ಲಿ 15 ಲಕ್ಷ ಉದ್ಯೋಗ ನಷ್ಟವಾಗಿತ್ತು ಎಂದು ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News